

ನವದೆಹಲಿ: ಭಾರತ ವಿಶ್ವ ಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹದ ಸದಸ್ಯತ್ವ ಪಡೆಯಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚೀನಾದ ಬೆಂಬಲವನ್ನು ಪಡೆಯುವುದಕ್ಕೂ ಭಾರತ ನಡೆಸುತ್ತಿರುವ ಪ್ರಯತ್ನ ಮುಂದುವರೆಯಲಿದ್ದು, ಬೇರೆ ರಾಷ್ಟ್ರಗಳ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಅರ್ಹತೆ ಆಧಾರದಲ್ಲಿ ಎನ್ ಎಸ್ ಜಿ ಸದಸ್ಯತ್ವ ತೀರ್ಮಾನವಾಗಬೇಕಾದ್ದರಿಂದ ಭಾರತ ಬೇರೆ ಯಾವುದೇ ರಾಷ್ಟ್ರಗಳ ಸದಸ್ಯತ್ವಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಚೀನಾ ವಿರೋಧ ವ್ಯಕ್ತಪಡಿಸುತ್ತಿದೆಯಾದರೂ, ಭಾರತ ಮಾತ್ರ ಚೀನಾ ಬೆಂಬಲವನ್ನೂ ಪಡೆಯಲು ಯತ್ನಿಸುತ್ತಿದೆ. ಇದರ ಭಾಗವಾಗಿ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಚೀನಾಗೆ ಭೇಟಿ ನೀಡಿ ಅಲ್ಲಿನ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಚರ್ಚೆ ನಡೆಸಿದ್ದಾರೆ.