

ನವದೆಹಲಿ: ಭಾರತಕ್ಕೆ ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹದ ಸದಸ್ಯತ್ವ ಸಿಗದೇ ಇರುವುದನ್ನು ವೈಫಲ್ಯ ಎನ್ನಲು ನಿರಾಕರಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯ(ಎಂಇಎ) ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಸಿಗುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ ಎಂದು ಹೇಳಿದೆ.
ಹೊಸ ಸದಸ್ಯ ರಾಷ್ಟ್ರಗಳನ್ನು ಸೇರ್ಪಡೆಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸಿಯೋಲ್ ನಲ್ಲಿ ನಡೆದ ಸಭೆ ವಿಫಲವಾಗಿರುವ ಹಿನ್ನೆಲೆಯಲ್ಲಿ ವರ್ಷಾಂತ್ಯಕ್ಕೆ ಮತ್ತೊಂದು ವಿಶೇಷ ಸಭೆ ನಡೆಯಲಿದೆ ಎಂದು ಹೇಳಿರುವ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ನೀಡುವ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೆ ಅದನ್ನು ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲ ಎಂದು ಎಂಇಎ ವಕ್ತಾರ ವಿಕಾಸ್ ಸ್ವರೂಪ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎನ್ ಎಸ್ ಜಿ ಸದಸ್ಯ ರಾಷ್ಟ್ರಗಳಲ್ಲ ಕೇವಲ ಒಂದು ರಾಷ್ಟ್ರ ಮಾತ್ರ ಭಾರತದ ಸದಸ್ಯತ್ವಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ ಉಳಿದೆಲ್ಲಾ ರಾಷ್ಟ್ರಗಳ ನಡುವೆ ಎನ್ ಎಸ್ ಜಿ ಸದಸ್ಯತ್ವ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಒಮ್ಮತ ಮೂಡಿಲ್ಲ, ಇದರಿಂದಾಗಿ ಭಾರತ ಸದಸ್ಯತ್ವ ಪಡೆಯುವುದು ವಿಳಂಬವಾಗಿದೆ ಎಂದು ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.