

ಮುಂಬೈ: ರಾಜಧಾನಿ ದೆಹಲಿಯಲ್ಲಿ ಎನ್ ಡಿಎ ಸರ್ಕಾರ ಬುಧವಾರ ಸಭೆ ನಡೆಸುತ್ತಿದ್ದು, ಪಕ್ಷದ ಸಭೆಗೆ ಶಿವಸೇನೆಗೆ ಆಹ್ವಾನವನ್ನು ನೀಡಿರಲಿಲ್ಲ ಎಂದು ಶಿವಸೇನೆ ಸಂಸದ ಅರವಿಂದ್ ಸಾವಂತ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ನವದೆಹಲಿಯಲ್ಲಿ ಇಂದು ಬಿಜೆಪಿ ಪಕ್ಷ ಎಲ್ಲಾ ನಾಯಕರು ಒಂದೆಡೆ ಸೇರುತ್ತಿದ್ದು, ಎನ್ ಡಿಎ ಸರ್ಕಾರ ಸಭೆ ನಡೆಸುತ್ತಿದೆ. ಆದರೆ, ಸಭೆಗೆ ಶಿವಸೇನೆಯನ್ನು ಆಹ್ವಾನ ಮಾಡಿಲ್ಲ. ಇದರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರ ಮೇಲೆ ಸಾಕಷ್ಟು ಅಸಮಾಧಾನಗಳು ಮೂಡಿವೆ ಎಂದು ಹೇಳಿದ್ದಾರೆ.
ಇದರಂತೆ ಸೇನೆಯ ಮತ್ತೊಬ್ಬ ಸಂಸದ ಸಂಜಯ್ ರಾವುತ್ ಮಾತನಾಡಿದ್ದು, ಲೋಕಸಭೆಯಲ್ಲಿ ಬಜೆಟ್ ಕುರಿತಂತೆ ಪಕ್ಷದಲ್ಲಿಯೇ ಕೆಲವು ವೈಮನಸ್ಸುಗಳು ಉಂಟಾದ ಕಾರಣ ಬಜೆಟ್ ಕುರಿತಂತೆ ಅರುಣ್ ಜೇಟ್ಲಿ ಅವರು ಸಭೆಯಲ್ಲಿ ಮಾತನಾಡಲಿದ್ದಾರೆ. ಆದರೆ, ನಮಗೆ ಆಹ್ವಾನವನ್ನು ನೀಡಿಲ್ಲ. ಸಭೆ ಕುರಿತಂತೆ ನಮಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದರಂತೆ ನಮಗೆ ಸಾಕಷ್ಟು ಬೇಸರವಾಗಿದೆ. ವೆಂಕಯ್ಯನಾಯ್ಡು ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ, ನಾವು ಇದನ್ನು ದೊಡ್ಡದು ಮಾಡಲು ಇಷ್ಟಪಡುವುದಿಲ್ಲ. ಈ ಬಗ್ಗೆ ಕಣ್ಣೀರನ್ನು ಹಾಕುವುದಿಲ್ಲ. ಸಾಮಾನ್ಯವಾಗಿಯೇ ನಾಯ್ಡು ಮೇಲೆ ಬೇಸರವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಕೆಲವು ಅಸಮಾಧಾನಗಳಿರುವುದು ಎಂದು ಹೇಳಿದ್ದಾರೆ. ಇದೇ ವೇಳೆ ಈ ಬಾರಿಯ ಬಜೆಟ್ ನಲ್ಲಿ ನೌಕರರ ಭವಿಷ್ಯ ನಿಧಿ ತೆರಿಗೆ ಹಿಂಪಡೆಯುವ ಸರ್ಕಾರದ ಪ್ರಸ್ತಾವನೆಗೆ ಸೇನೆ ವಿರೋಧ ವ್ಯಕ್ತಪಡಿಸಿದೆ ಎಂಬ ಆರೋಪಗಳಿಗೆ ಉತ್ತರಿಸಿದ ಅವರು, ಸೇನೆ ವಿರೋಧ ವ್ಯಕ್ತಪಡಿಸಿರುವುದು ನಿಜ ಎಂದಿದ್ದಾರೆ.
ನೌಕರರ ಭವಿಷ್ಯ ನಿಧಿ ಹಿಂಪಡೆಯುವ ವಿಚಾರ ಕುರಿತಂತೆ ಮಹಾರಾಷ್ಟ್ರ ಬಿಜೆಪಿ ನೇತೃತ್ವದ ಸ್ವಾಭಿಮಾನಿ ಶೆತ್ಕಾರಿ ಸಂಘ್ತಾನದ ಕಾರ್ಯಕರ್ತರು ಮಾತನಾಡಿದ್ದು, ಇಪಿಎಫ್ ಹಿಂಪಡೆಯುವುದು ಸರಿಯಲ್ಲ. ಇದಕ್ಕೆ ನಮ್ಮ ವಿರೋಧವಿದೆ. ನೌಕರರ ಭವಿಷ್ಯ ನಿಧಿ ಎಂಬುದು ಪರಿಶ್ರಮದ ಹಣವಾಗಿದೆ. ಇದಕ್ಕೆ ತೆರಿಗೆಯನ್ನು ವಿಧಿಸಬಾರದು. ಈ ವಿಚಾರವನ್ನು ಮೇಲ್ಮನೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಹೇಳಿದ್ದಾರೆ.