ನವದೆಹಲಿ: ನನ್ನ ಕುತ್ತಿಗೆ ಮೇಲೆ ಕತ್ತಿಯಿಟ್ಟರೂ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳಲ್ಲ ಎಂಬ ವಿವಾದಾತ್ಮಕ ಮುಸ್ಲಿಂ ನಾಯಕ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿಕೆ ನಾಚಿಕೆಗೇಡು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.
ಇಂದು ಅಸಾದುದ್ದೀನ್ ಓವೈಸಿ ಹೇಳಿಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ, ಭಾರತ ನಮ್ಮ ತಾಯಿ ಮತ್ತು ನಮ್ಮ ತಾಯಿಗೆ ವಂದನೆ ಸಲ್ಲಿಸಲು ಯಾರೂ ಆಕ್ಷೇಪ ವ್ಯಕ್ತಪಡಿಸಬಾರದು. ಆದರೆ ದೇಶದಲ್ಲಿ ಅದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ದುರದೃಷ್ಟಕರ ಎಂದರು.
'ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಲ್ಲ ಎನ್ನುವವರು ನಾಚಿಕೆಯಿಲ್ಲದವರು. ಅಂತವರಿಗೆ ಕೆಲವು ಪಕ್ಷಗಳು ಬೆಂಬಲಿಸುತ್ತಿರುವುದು ದುರದೃಷ್ಟಕರ. ನಮ್ಮ ತಾಯಿಯನ್ನು ನಾವು ಗೌರವಿಸಲು ಯಾವುದೇ ಕಾನೂನು ಬೇಕಿಲ್ಲ' ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ನೂತನ ತಲೆಮಾರು ಮದರ್ ಇಂಡಿಯಾ ಎಂದು ಘೋಷಣೆ ಕೂಗುವ ಬಗ್ಗೆ ಚಿಂತನೆ ಮಾಡಬೇಕು ಎಂಬ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಓವೈಸಿ, ನನ್ನ ಕುತ್ತಿಗೆ ಮೇಲೆ ಕತ್ತಿ ಹಿಡಿದು ಆ ಘೋಷಣೆ ಕೂಗು ಅಂದರೂ ನಾನು ಕೂಗಲ್ಲ ಎಂದಿದ್ದರು.