

ಡೆಹ್ರಾಡೂನ್, ನವದೆಹಲಿ: ಹರೀಶ್ ರಾವತ್ ನೇತೃತ್ವದ ಸರ್ಕಾರ ವಿಧಾನ ಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸುವ ಒಂದು ದಿನ ಮುಂಚೆ ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿನ್ನೆ ದೆಹಲಿಯಲ್ಲಿ ನಡೆದ ತುರ್ತು ಸಂಪುಟ ಸಭೆಯಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಶಿಫಾರಸ್ಸು ಮಾಡಲಾಗಿತ್ತು. ಅದಕ್ಕೆ ಇಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅಧಿಕೃತ ಒಪ್ಪಿಗೆ ಸಿಕ್ಕಿದೆ.
ಉತ್ತರಾಖಂಡ ರಾಜ್ಯದಲ್ಲಿ ಈ ತಿಂಗಳ ಆರಂಭದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಆಡಳಿತಾರೂಢ ಕಾಂಗ್ರೆಸ್ ನ 9 ಮಂದಿ ಶಾಸಕರು ಮುಖ್ಯಮಂತ್ರಿ ಹರೀಶ್ ರಾವತ್ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದರು. ಈ ಶಾಸಕರಿಗೆ ನಿನ್ನೆ ನೊಟೀಸ್ ಜಾರಿ ಮಾಡಿದ್ದ ವಿಧಾನಸಭಾಧ್ಯಕ್ಷರು, ಪಕ್ಷಾಂತರ ವಿರೋಧಿ ಕಾನೂನಿನಡಿ ಯಾಕೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬಾರದು ಎಂದು ಕೇಳಿದ್ದರು.
ನಿನ್ನೆ ಬಂಡಾಯ ಶಾಸಕರು ಮುಖ್ಯಮಂತ್ರಿ ರಾವತ್ ವಿರುದ್ಧ ರಹಸ್ಯ ಕಾರ್ಯಾಚರಣೆಯ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ತಮ್ಮ ಸರ್ಕಾರವನ್ನು ಉಳಿಸಲು ಮುಖ್ಯಮಂತ್ರಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದರು. ಆಗ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ರಾಜ್ಯ ಬಿಜೆಪಿ ಒತ್ತಾಯಿಸಿತ್ತು.