

ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು 4 ಉಗ್ರರ ಹೆಸರನ್ನು ಬಹಿರಂಗಪಡಿಸಿದ್ದಾರೆಂದು ಗುರುವಾರ ತಿಳಿದುಬಂದಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ದಾಳಿ ಹಿಂದೆ ಇಬ್ಬರು ಉಗ್ರರು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹಾಗೂ ಇನ್ನಿಬ್ಬರು ಫಿದಾಯಿನ್ ಸಂಘಟನೆಗೆ ಸೇರಿದ ಉಗ್ರರೆಂದು ಹೇಳಿದ್ದು, ಉಗ್ರರನ್ನು ನಾಸಿರ್ ಹುಸೇನ್, ಹಫೀಸ್ ಅಬು ಬಕರ್, ಅಬ್ದುಲ್ ಕ್ವಾಯುಮ್ ಮತ್ತು ಉಮರ್ ಫರೂಕ್ ಎಂದು ಗುರ್ತಿಸಲಾಗಿದೆ.
2016ರ ಜನವರಿ ಮೊದಲ ವಾರದಲ್ಲಿ ಭಾರತ ಮತ್ತು ಪಾಕಿಸ್ತಾನಗ ಗಡಿಭಾಗದಿಂದ ಕೇವಲ 40 ಕಿ.ಮೀ. ದೂರದಲ್ಲಿರುವ ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರು ದಾಳಿ ಮಾಡಿದ್ದರು. ಇದರಂತೆ ಸುಮಾರು 60 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಭದ್ರತಾ ಪಡೆಗಳ ವೇಳೆ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದರು.
ಉಗ್ರರ ಮೃತದೇಹವನ್ನು ಪರಿಶೀಲಿಸಿ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದರು. ಇದೀಗ ಈ ಮಾಹಿತಿಯನ್ನು ಎನ್ ಐಎ ಪಾಕಿಸ್ತಾನ ಜಂಟಿ ತನಿಖಾ ಆಯೋಗದೊಂದಿಗೆ ಹಂಚಿಕೊಂಡಿದ್ದು, ಪಾಕ್ ತನಿಖಾ ತಂಡದ ದೃಢೀಕರಣಕ್ಕಾಗಿ ಕಾಯುತ್ತಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಇತ್ತೀಚೆಗಷ್ಟೇ ರಾಷ್ಟ್ರೀಯ ತನಿಖಾ ತಂಡ ಪಠಾಣ್ ಕೋಟ್ ದಾಳೆ ವೇಳೆ ಹತರಾದ ಉಗ್ರರ ಫೋಟೋವನ್ನು ಸಾರ್ವಜನಿಕರು ಗುರ್ತಿಸುವ ಸಲುವಾಗಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿತ್ತು. ಅಲ್ಲದೆ, ದಾಳಿ ಹಿಂದೆ ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಕೈವಾಡವಿರುವುದಾಗಿ ಹೇಳಿದ್ದ ತಂಡವು, ಕಶಿಫ್ ಜಾನ್ ಮತ್ತು ಶಾಹಿದ್ ಲಾಟಿಫ್ ದಾಳಿ ಹಿಂದಿರುವ ಪ್ರಮುಖ ಉಗ್ರರಾಗಿದ್ದಾರೆಂದು ಹೇಳಿದ್ದರು. ತನಿಖೆ ವೇಳೆ ಕಶಿಫ್ ಹೆಸರು ಬಹಿರಂಗವಾದಾಗಿನಿಂದ ಆತ ಕಣ್ಮೆರೆಯಾಗಿದ್ದಾನೆಂದು ಹೇಳಲಾಗುತ್ತಿತ್ತು.