

ನವದೆಹಲಿ: ಭಾರತೀಯ ರೈಲ್ವೆಯ ವೆಬ್ ಸೈಟ್ ಹ್ಯಾಕ್ ಆಗಿದೆ ಎಂಬ ವರದಿಯನ್ನು ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್ (ಐಆರ್ ಸಿಟಿಸಿ) ತಳ್ಳಿ ಹಾಕಿದೆ.ಅಂತರ್ಜಾಲ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂದೀಪ್ ದತ್ತಾ ತಿಳಿಸಿದ್ದಾರೆ.
ರೈಲ್ವೆ ವೆಬ್ ಸೈಟ್ ನ ಬಳಕೆದಾರರ ದೂರವಾಣಿ ಸಂಖ್ಯೆ, ಹುಟ್ಟಿದ ದಿನಾಂಕ ಮೊದಲಾದ ಮಾಹಿತಿಗಳನ್ನೊಳಗೊಂಡ ಸಿಡಿಯನ್ನು ಮಾರುಕಟ್ಟೆಯಲ್ಲಿ 15 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ಸೈಬರ್ ಸೆಲ್ ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಹ್ಯಾಕಿಂಗ್ ವದಂತಿ ಹರಡಿತು. ಇದರಿಂದ ಲಕ್ಷಾಂತರ ಗ್ರಾಹಕರಿಗೆ ಭಯ ಹುಟ್ಟಿಕೊಂಡಿತು.
ಮಹಾರಾಷ್ಟ್ರ ರಾಜ್ಯ ಸೈಬರ್ ಘಟಕಕ್ಕೆ ದಾಖಲೆಗಳನ್ನು ಒದಗಿಸುವಂತೆ ಮನವಿ ಮಾಡಿದ್ದೇವೆ. ದಾಖಲೆಗಳು ಸಿಕ್ಕಿದ ಕೂಡಲೇ ಅದು ರೈಲ್ವೆ ಇಲಾಖೆಗೆ ಸಂಬಂಧಪಟ್ಟದ್ದೇ ಎಂದು ಪರಿಶೀಲಿಸಬಹುದು ಎಂದರು.
ಬೇರೆಯವರಿಗೆ ಸೇರಿದ ದಾಖಲೆಗಳನ್ನು ಮಾರುಕಟ್ಟೆಯಲ್ಲಿ ರೈಲ್ವೆ ಇಲಾಖೆಗೆ ಧಕ್ಕೆಯನ್ನುಂಟುಮಾಡಲು ಇಲಾಖೆಯ ಹೆಸರಿನಲ್ಲಿ ಮಾರಾಟ ಮಾಡುತ್ತಿರಬಹುದು ಎಂದು ದತ್ತ ಹೇಳಿದರು.
ಐಆರ್ ಸಿಟಿಸಿ ವೆಬ್ ಸೈಟ್ ನ್ನು ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ ನೋಡಿಕೊಳ್ಳುತ್ತಿದ್ದು ಅದು ರೈಲ್ವೆ ಸಚಿವಾಲಯದ ಒಂದು ಭಾಗವಾಗಿದೆ.ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಮಾರಾಟ ಮಾಡುತ್ತಿರುವ ಹ್ಯಾಕರ್ ಗಳನ್ನು ಮಹಾರಾಷ್ಟ್ರ ಸರ್ಕಾರ ಗುರುತಿಸಿದೆ ಎಂದು ಸಹ ಮಾಧ್ಯಮಗಳಲ್ಲಿ ವರದಿಯಾಗಿದೆ.
ಐಆರ್ ಸಿಟಿಸಿ ಭಾರತದ ಅತಿದೊಡ್ಡ ಇ-ಕಾಮರ್ಸ್ ವೆಬ್ ಸೈಟ್ ಆಗಿದೆ. ಪ್ರತಿನಿತ್ಯ ಲಕ್ಷಾಂತರ ವಹಿವಾಟು ವೆಬ್ ಸೈಟ್ ಮೂಲಕ ನಡೆಯುತ್ತದೆ. ಗ್ರಾಹಕರು ತಮ್ಮ ಹುಟ್ಟಿದ ದಿನಾಂಕ, ಹೆಸರು, ಪ್ಯಾನ್ ಸಂಖ್ಯೆ ಮೊದಲಾದ ವಿವರಗಳನ್ನು ಟಿಕೆಟ್ ಬುಕ್ಕಿಂಗ್ ಮಾಡುವಾಗ ವೆಬ್ ಸೈಟ್ ನಲ್ಲಿ ಹಂಚಿಕೊಳ್ಳುತ್ತಾರೆ.