ನವದೆಹಲಿ: 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, 1000 ರುಪಾಯಿ ಬದಲು 2000 ರುಪಾಯಿ ನೋಟ್ ಚಲಾವಣೆಗೆ ತರುವುದರಿಂದ ಕಪ್ಪು ಹಣ ನಿಯಂತ್ರಿಸಲು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಜನರ ಬಗ್ಗೆ ಕಾಳಜಿ ಹೊಂದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
1000 ರುಪಾಯಿ ಬದಲು 2000 ರುಪಾಯಿ ಚಲಾವಣೆಗೆ ತರುವುದರಿಂದ ಕಪ್ಪು ಹಣ ನಿಯಂತ್ರಿಸಲು ಹೇಗೆ ಸಾಧ್ಯ? ಎಂದು ಮೋದಿ ಲಾಜಿಕ್ ಅನ್ನು ಪ್ರಶ್ನಿಸಿರುವ ರಾಹುಲ್, ಮೋದಿ ಸರ್ಕಾರ ರೈತರು, ಸಣ್ಣ ವ್ಯಾಪಾರಿಗಳನ್ನು ಮತ್ತು ಗೃಹಣಿಯರನ್ನು ಬೀದಿಗೆ ಎಸೆಯಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ನಕಲಿ ನೋಟುಗಳ ಹಾವಳಿ ತಡೆಯುವುದಕ್ಕಾಗಿ ಮಧ್ಯರಾತ್ರಿಯಿಂದಲೇ 500 ಹಾಗೂ 1000 ರುಪಾಯಿ ನೋಟ್ ಗಳಿಗೆ ನಿಷೇಧ ಹೇರಿದ್ದಾರೆ.