ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಮ ಜಿಲ್ಲೆಯ ಕಾಕಪೋರಾದಲ್ಲಿ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಹತ್ಯೆ ಮಾಡಿದ್ದು, ಗುಂಡಿನ ಕಾಳಗ ಇನ್ನು ಮುಂದುವರೆದಿದೆ.
ವರದಿಗಳ ಪ್ರಕಾರ ಇನ್ನೂ ಇಬ್ಬರು ಉಗ್ರರು ಅಡಗಿ ಕುಳಿತಿದ್ದು, ಭದ್ರತಾ ಪಡೆಗಳು ಕಾಕಪೋರಾ ಪ್ರದೇಶವನ್ನು ಸಂಪೂರ್ಣ ಸುತ್ತುವರೆದಿವೆ.
ಕಾಕಪೋರಾ ಪ್ರದೇಶದ ಬೇಗಂಬಾಗ್ ನಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಡಗಿ ಕುಳಿತಿದ್ದ ಉಗ್ರರು ಇದ್ದಕ್ಕಿದ್ದಂತೆ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿ ಓರ್ವ ಉಗ್ರನನ್ನು ಹೊಡೆದುರುಳಿಸಿವೆ ಎಂದು ಹೇಳಿದ್ದಾರೆ.