

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಕ್ತದ ದಲ್ಲಾಳಿ ಹೇಳಿಕೆಯನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಖಂಡಿಸಿದ್ದಾರೆ.
ಸೈನಿಕರ ಬಲಿದಾನವನ್ನು ರಕ್ತದ ದಲ್ಲಾಳಿಗೆ ಹೋಲಿಕೆ ಮಾಡಿರುವ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. "ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದಾಗ ನಾವು ಪರಸ್ಪರ ಇರುವ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಈ ಹಿಂದೆಯೂ ಹೇಳಿದ್ದೇನೆ" ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಸೇನೆ ನಡೆಸಿರುವ ಸೀಮಿತ ದಾಳಿ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ನೀಡಬೇಕು ಎಂದು ಕೇಜ್ರಿವಾಲ್ ಕರೆ ನೀಡಿದ್ದಾರೆ. ರಕ್ತದ ದಲ್ಲಾಳಿ ಹೇಳಿಕೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ್ದ ರಾಹುಲ್ ಗಾಂಧಿ, ಸೇನೆಯ ಕಾರ್ಯಾಚರಣೆಯನ್ನು ಬೆಂಬಲಿಸುತ್ತೇನೆ ಆದರೆ ಸೇನೆಯ ಕಾರ್ಯಾಚರಣೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.