"ಹರ್ಬಲ್ ಪೆಟ್ರೋಲ್" ನಕಲಿ ಸಂಶೋಧಕ ರಾಮರ್ ಪಿಳ್ಳೈಗೆ ಮೂರು ವರ್ಷ ಜೈಲು!

ಗಿಡಮೂಲಿಕೆಗಳಿಂದ ಪೆಟ್ರೋಲ್ ತಯಾರಿಸಿದ್ದೇನೆ ಎಂದು ಹೇಳಿಕೊಂಡು ರಾತ್ರೋ ರಾತ್ರಿ ಖ್ಯಾತಿಗಳಿಸಿದ್ದ ನಕಲಿ ಸಂಶೋಧಕ ರಾಮರ್ ಪಿಳ್ಳೈ ಮತ್ತು ಆತನ ಸಂಗಡಿಗರಿಗೆ ಮೂರು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿ ತಮಿಳುನಾಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಹರ್ಬಲ್ ಪೆಟ್ರೋಲ್ ನಕಲಿ ಸಂಶೋಧಕ ರಾಮರ್ ಪಿಳ್ಳೈ (ಸಂಗ್ರಹ ಚಿತ್ರ)
ಹರ್ಬಲ್ ಪೆಟ್ರೋಲ್ ನಕಲಿ ಸಂಶೋಧಕ ರಾಮರ್ ಪಿಳ್ಳೈ (ಸಂಗ್ರಹ ಚಿತ್ರ)
Updated on: 

ಚೆನ್ನೈ: ಗಿಡಮೂಲಿಕೆಗಳಿಂದ ಪೆಟ್ರೋಲ್ ತಯಾರಿಸಿದ್ದೇನೆ ಎಂದು ಹೇಳಿಕೊಂಡು ರಾತ್ರೋ ರಾತ್ರಿ ಖ್ಯಾತಿಗಳಿಸಿದ್ದ ನಕಲಿ ಸಂಶೋಧಕ ರಾಮರ್ ಪಿಳ್ಳೈ ಮತ್ತು ಆತನ ಸಂಗಡಿಗರಿಗೆ ಮೂರು  ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿ ತಮಿಳುನಾಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿದೆ.

"ಹರ್ಬಲ್ ಪೆಟ್ರೋಲ್" ಹೆಸರಲ್ಲಿ ಜನರನ್ನು ವಂಚಿಸಿದ ಆರೋಪ ಎದುರಿಸುತ್ತಿದ್ದ ರಾಮರ್ ಪಿಳ್ಳೈ ಹಾಗೂ ಆತನ ಸಹಚರರಾದ ಆರ್ ವೇಣುದೇವಿ, ಎಸ್ ಚಿನ್ನಸ್ವಾಮಿ, ಆರ್ ರಾಜಶೇಖರನ್  ಹಾಗೂ ಎಸ್ ಕೆ ಭರತ್ ಎಂಬುವವರಿಗೆ ನ್ಯಾಯಾಲಯ ಮೂರು ವರ್ಷ ಕಠಿಣ ಸಜೆ ವಿಧಿಸಿದೆ. ಅಲ್ಲದೆ ಎಲ್ಲ ಅಪರಾಧಿಗಳಿಗೆ 30 ಸಾವಿರ ದಂಡ (ತಲಾ 6 ಸಾವಿರ ರು.) ವಿಧಿಸಿ ಮೆಟ್ರೋಪಾಲಿಟನ್  ಮ್ಯಾಜಿಸ್ಟ್ರೇಟ್ ಮುಖ್ಯ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

1995ರಲ್ಲಿ ತಮಿಳುನಾಡಿನಲ್ಲಿ ಹರ್ಬಲ್ ಪೆಟ್ರೋಲ್ ಸಂಶೋಧಿಸಿರುವುದಾಗಿ ಘೋಷಿಸಿ ಸಂಚಲನ ಸೃಷ್ಟಿಸಿದ್ದ ರಾಮರ್ ಪಿಳ್ಳೈ, ಪೆಟ್ರೋಲಿಯಂ ಉತ್ಪನ್ನಗಳಿಗೆ ಕೈಗೆ ಸಿಕ್ಕ ಗಿಡಮೂಲಿಕೆಗಳನ್ನು  ಹಾಕಿ ನಕಲಿ ಪೆಟ್ರೋಲ್ ಸೃಷ್ಟಿ ಮಾಡಿದ್ದ. ಅಲ್ಲದೇ ಈ ಪೆಟ್ರೋಲ್ ಅನ್ನು ತಾನು ಕೇವಲ ಪ್ರತೀ ಲೀಟರ್ ಗೆ 5 ರುನಂತೆ ಮಾರಾಟ ಮಾಡುವುದಾಗಿ ಘೋಷಿಸಿದ್ದ. ಕನಿಷ್ಟ ಹೈಸ್ಕೂಲು ಕೂಡ  ದಾಟದ ಈತನ ಸಂಶೋಧನೆಗೆ ಸ್ವತಃ ಅಂದಿನ ತಮಿಳುನಾಡು ಸಿಎಂ ಕರುಣಾನಿಧಿ ಬೆಂಬಲ ವ್ಯಕ್ತಪಡಿಸಿದ್ದರು.

ಪೆಟ್ರೋಲ್ ತಯಾರಿಸುವ ತನ್ನ ವಿಧಾನಕ್ಕೆ ಪೇಟೆಂಟ್ ಸಿಕ್ಕಿದೆಯೆಂದೂ ತಾನು ಐದೇ ರುಪಾಯಿಗಳಿಗೆ ಒಂದೊಂದು ಲೀಟರ್ ಪೆಟ್ರೋಲ್ ಒದಗಿಸುತ್ತೇನೆಂದೂ ರಾಮರ್ ಪಿಳ್ಳೈ ಹೇಳಿಕೊಂಡಿದ್ದ.  ಶ್ರಿಪೆರಂಬುದೂರಿನ ತನ್ನ ಫ್ಯಾಕ್ಟರಿಯಲ್ಲಿ ದಿನಕ್ಕೆ ಒಂದು ಲಕ್ಷ ಲೀಟರ್ ಜೈವಿಕ ಇಂಧನವನ್ನು ಉತ್ಪಾದಿಸುವುದಾಗಿಯೂ ಹೇಳಿಕೊಂಡಿದ್ದ.

ಆದರೆ ಈತನ ಸಂಶೋಧನೆಯ ಕುರಿತು ಶಂಕೆ ವ್ಯಕ್ತಪಡಿಸಿದ್ದ ವಿಜ್ಞಾನಿಗಳು ಆತನ "ಹರ್ಬಲ್ ಪೆಟ್ರೋಲ್" ಅನ್ನು ಪುಣೆಯ ರಸಾಯನವಿಜ್ಞಾನ ಸಂಸ್ಥೆಯಲ್ಲಿ ಹಾಗೂ ಡೆಹರಾಡೂನ್‌ನ  ಪೆಟ್ರೋಲಿಯಂ ಸಂಶೋಧನ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಿದರು. ಬಳಿಕವೇ ಈ ನಕಲಿ ಸಂಶೋಧಕನ ಸಂಶೋಧನೆ ಕೇವಲ ಕಣ್ಕಟ್ಟು ವಿದ್ಯೆ ಎಂದು ತಿಳಿಯಿತು. 1999-2000ರಲ್ಲಿ ಪ್ರಕರಣವನ್ನು  ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಸಿಬಿಐಗೆ ತನಿಖಾ ಜವಾಬ್ದಾರಿ ಹೊರಿಸಿತು. ಅಕ್ರಮಗಳ ಪೂರೈಕೆ, ವಿತರಣೆ ಮತ್ತು ತಡೆಗಟ್ಟುವಿಕೆ ನಿಯಂತ್ರಣ ಕಾಯ್ದೆಯಡಿಯಲ್ಲಿ ಪ್ರಕರಣದ ಸಂಪೂರ್ಣ  ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ಈತನ ಸಂಶೋಧನೆ ನಕಲಿ ಎಂದು ಸಾಬೀತು ಪಡಿಸಿ, ಈತ ಪೆಟ್ರೋಲಿಯಂ ಉತ್ಪನ್ನಗಳಿಗೆ ಕೆಲ ಗಿಡಮೂಲಿಕೆಗಳನ್ನು ಮಿಶ್ರಣ ಮಾಡುತ್ತಿದ್ದ ಅಂಶವನ್ನು  ಹೊರಹಾಕಿದ್ದರು.

ಅಲ್ಲದೆ ತನ್ನ ಹರ್ಬಲ್ ಪೆಟ್ರೋಲ್ ಮಾರಟಕ್ಕಾಗಿ ಏಜೆಂಟ್ ಗಳನ್ನು ನೇಮಿಸಿಕೊಂಡಿದ್ದ ರಾಮರ್ ಪಿಳ್ಳೈ ಅವರಿಂದ ಅಪಾರ ಪ್ರಮಾಣದ ಡೆಪಾಸಿಟ್ ಹಣ ಸಂಗ್ರಹಿಸಿದ್ದ. ಅಂತೆಯೇ ತನ್ನ ನಕಲಿ  ಹರ್ಬಲ್ ಪೆಟ್ರೋಲ್ ಮಾರಾಟ ಮಾಡಿ ಜನರಿಂದ ಸುಮಾರು 2.27 ಕೋಟಿ ಹಣ ಸಂಪಾದನೆ ಮಾಡಿದ್ದ ಎಂದು ಸಿಬಿಐ ತನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿತ್ತು.

ಇದೀಗ ನ್ಯಾಯಾಲಯ ಈ ಹಳೆಯ ಪ್ರಕರಣ ಸಂಬಂಧ ತನ್ನ ತೀರ್ಪು ನೀಡಿದ್ದು, ಪ್ರಕರಣದ ಎಲ್ಲ ಐವರು ಆರೋಪಿಗಳಿಗೆ ಮೂರು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com