

ಕೋಲ್ಕತಾ: ಪಾಕಿಸ್ತಾನಕ್ಕೆ ಭೇಟಿ ನೀಡಿದ ಕಾರಣಕ್ಕೆ ಪ್ರಧಾನಿ ಮೋದಿಯವರು ಕ್ಷಮೆಯಾಚಿಸಬೇಕೆಂದು ಹೇಳಿದ್ದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಬೆನ್ನಿಗೆ ಇದೀಗ ಕಾಂಗ್ರೆಸ್ ನಿಂತಿದ್ದು, ಮೋದಿಯವರು ಕ್ಷಮೆಯಾಚಿಸಬೇಕೆಂದು ಆಗ್ರಹಿದೆ.
ಪಾಕಿಸ್ತಾನ ನಟ ಫವಾದ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಯೇ ದಿಲ್ ಹೈ ಮುಷ್ಕಿಲ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದರೂ ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರಬೇಕು ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾರತದ ಚಿತ್ರಮಂದಿರ ಮಾಲೀಕರು ಮತ್ತು ಪ್ರದರ್ಶಕರ ಸಂಘ(ಸಿಒಇಎಐ), ಪಾಕಿಸ್ತಾನ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರು ಪಾಲ್ಗೊಂಡಿರುವ ಚಿತ್ರಗಳಿಗೆ ಬಿಡುಗಡೆಗೆ ಅವಕಾಶವಿಲ್ಲ ಎಂದು ಹೇಳಿತ್ತು.
ಇದರಂತೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಅನುರಾಗ್ ಕಶ್ಯಪ್ ಅವರು, ಯೇ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಪಾಕಿಸ್ತಾನ ನಟ ಪವಾದ್ ಖಾನ್ ನಟಿಸಿರುವುದಕ್ಕೆ ನಿರ್ದೇಶಕ ಕರಣ್ ಕ್ಷಮೆಯಾಚಿಸಬೇಕಾ?... ಪ್ರಧಾನಿ ಮೋದಿ ಅವರು ಕೂಡ ಲಾಹೋರ್ ಗೆ ಭೇಟಿ ನೀಡಿ ಪಾಕ್ ಪ್ರಧಾನಿ ನವಾಜ್ ಷರೀಫ್ ರನ್ನು ಭೇಟಿಯಾಗಿ ಬಂದಿದ್ದರು, ಮೋದಿಯವರೂ ಕೂಡ ಕ್ಷಮೆಯಾಚಿಸಲಿ ಎಂದು ಹೇಳಿದ್ದರು.
ಕಶ್ಯಪ್ ಅವರ ಈ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಪ್ರದೀಪ್ ಭಟ್ಟಾಚಾರ್ಯ ಅವರು, ಅನುರಾಗ್ ಕಶ್ಯಪ್ ಅವರು ಸರಿಯಾಗಿ ಹೇಳಿದ್ದಾರೆ. ಈ ವಿಚಾರವನ್ನು ಭಾರತದಲ್ಲಿರುವ ಪ್ರತೀಯೊಬ್ಬ ಪ್ರಜೆಯೂ ಆಲೋಚಿಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದರು. ಅವರೂ ಕೂಡ ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ.