

ಮುಂಬೈ: ಉತ್ತರಪ್ರದೇಶ ರಾಜ್ಯದ ರಾಜಕೀಯದಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಅವರೇ ಕಾರಣರಾಗಿದ್ದು, ಸಮಾಜವಾದಿ ಪಕ್ಷವನ್ನು ರಕ್ಷಣೆ ಮಾಡಬೇಕಿದ್ದರೆ, ಅಮರ್ ಸಿಂಗ್ ಅವರನ್ನು ಪಕ್ಷದಿಂದ ಹೊರಹಾಕಬೇಕಿದೆ ಎಂದು ಮಹಾರಾಷ್ಟ್ರ ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ಅಬು ಅಜ್ಮಿ ಅವರು ಸೋಮವಾರ ಹೇಳಿದ್ದಾರೆ.
ಸಮಾಜವಾದಿ ಪಕ್ಷ ಇಬ್ಭಾಗವಾಗುವ ಬೆಳವಣಿಗೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪಕ್ಷದಲ್ಲಿ ಇಂದು ಅಹಿತಕರ ಬೆಳವಣಿಗೆಗಳು ನಡೆಯುತ್ತಿದೆ ಎಂದರೆ, ಇದಕ್ಕೆ ಕೇವಲ ಒಬ್ಬ ವ್ಯಕ್ತಿ ಕಾರಣರಾಗಿದ್ದಾರೆ., ಅಮರ್ ಸಿಂಗ್ ಅವರಿಂದಲೇ ಇಂದು ಪಕ್ಷ ಇಬ್ಭಾಗವಾಗುವ ಹಂತಕ್ಕೆ ಬಂದು ನಿಂತಿದೆ. ಸಮಾಜವಾದಿ ಪಕ್ಷವನ್ನು ರಕ್ಷಿಸಬೇಕೆಂದರೆ ಮೊದಲು ಅಮರ್ ಸಿಂಗ್ ಅವರನ್ನು ಪಕ್ಷದಿಂದ ಹೊರಹಾಕಬೇಕಿದೆ. (ಅಮರ್ ಸಿಂಗ್ ಹಟಾವೋ, ಸಮಾಜವಾದಿ ಪಾರ್ಟಿ ಬಚಾವೋ) ಎಂದು ಅಜ್ಮಿ ಅವರು ಹೇಳಿದ್ದಾರೆ.
ಅಮರ್ ಸಿಂಗ್ ಅವರು ನಮ್ಮನ್ನು ಅಶ್ಲೀಲವಾಗಿ ನಿಂದಿಸಿದ್ದರು. ಸಮಾಜವಾದಿ ಪಕ್ಷವನ್ನು ನಾಶ ಮಾಡುತ್ತೇನೆಂದು ಈ ಹಿಂದೆ ಹೇಳಿದ್ದರು. ಇದೀಗ ಅವರ ಕನಸು ನನಸಾಗಿದೆ. ನೇತಾಜಿ (ಮುಲಾಯಂ ಸಿಂಗ್) ಅವರೇ ಸರ್ವಾಧಿಕಾರಿ ಬೇಡ. ಕುಟುಂಬ ಸದಸ್ಯರು ನೀಡುತ್ತಿರುವ ಸಲಹೆಯನ್ನು ತೆಗೆದುಕೊಂಡು ಮೊದಲು ಅಮರ್ ಸಿಂಗ್ ಅವರನ್ನು ಪಕ್ಷದಿಂದ ಹೊರಹಾಕಿ. ಪ್ರತೀಯೊಬ್ಬರಿಗೂ ಬೈಯ್ಯುವ ಅಧಿಕಾರ ನಿಮಗಿದೆ. ಬೈದಾಗಲೇ ಪಕ್ಷ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ.
ಹೃದಯದಲ್ಲಿ ಬರುವ ಮಾತನ್ನು ನಾನು ನೇರವಾಗಿ ಹೇಳುತ್ತೇನೆಂದು ನೀವು ಹೇಳುತ್ತೀರಿ. ಸಮಾಜವಾದಿ ಪಕ್ಷವೊಂದು ಕುಟುಂಬವಿದ್ದಂತೆ. ಇಲ್ಲಿರುವ ಪ್ರತೀಯೊಬ್ಬರಿಗೂ ಸ್ವತಂತ್ರವಾಗಿ ಮಾತನಾಡುವ ಹಕ್ಕಿದೆ. ನಾನೂ ಕೂಡ ಪಕ್ಷದಲ್ಲಿ 20 ವರ್ಷಗಳ ದುಡಿದಿದ್ದೇನೆ. ನೀವು ನಮಗೆ ಶಕ್ತಿ ನೀಡಿದ್ದೀರ. ಮುಂಬೈನಲ್ಲಿದ್ದಾಗ ಸಾಕಷ್ಟು ಕಷ್ಟವನ್ನು ಪಟ್ಟಿದ್ದೇವೆ. ಸಾಕಷ್ಟು ಶ್ರಮಗಳ ಬಳಿಕ ಇದೀಗ ನಾನು ಶಾಸಕನಾಗಿದ್ದೇನೆ.
ಪಕ್ಷ ಒಡೆದಾಗಲೂ ನಾನು ಎಂದಿಗೂ ದೂರಾಗಿರಲಿಲ್ಲ. ಸಚಿವ ಸ್ಥಾನ ಅವಕಾಶಗಳು ಬಂದರೂ ಪಕ್ಷದಲ್ಲಿ ಜವಾನನಾಗಿ ಕೆಲಸ ಮಾಡುತ್ತೇನೆಯೇ ಹೊರತು ಪಕ್ಷ ಬಿಟ್ಟು ಬರುವುದಿಲ್ಲ ಎಂದು ಹೇಳಿದ್ದೆ. ನೀವು ನಮ್ಮನ್ನು ಅರ್ಥಮಾಡಿಕೊಂಡಿದ್ದೀರ. ನಮ್ಮ ಕುಟುಂಬವನ್ನು ರಕ್ಷಿಸಿ ಎಂದು ನಾನು ನಿಮ್ಮಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ಮುಲಾಯಂ ಸಿಂಗ್ ಅವರಿಗೆ ಅಬು ಅಜ್ಮಿ ಅವರು ಹೇಳಿದ್ದಾರೆ.