

ಭುವನೇಶ್ವರ: ಬಿಜು ಜನಾದಳ(ಬಿಜೆಡಿ)ದ ಮೂವರು ಶಾಸಕರು ಉದ್ಯಮಿಯೊಬ್ಬರಿಂದ ಲಂಚ ಕೇಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಮೂವರು ಶಾಸಕರನ್ನು ರಾಜ್ಯ ಜಾಗೃತ ದಳದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ತಮ್ಮ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಉದ್ಯಮಿಯೊಬ್ಬರಿಂದ ಲಂಚ ಕೇಳಿದ ಶಾಸಕರಾದ ಸೀಮರಾಣಿ ನಾಯಕ್, ಸುಶಾಂತ್ ಬೆಹೆರಾ ಹಾಗೂ ಬಿಜಯ್ ನಾಯಕ್ ಅವರನ್ನು ಜಾಗೃತ ದಳದ ಮುಖ್ಯ ಕಚೇರಿಯಲ್ಲಿ ಬುಧವಾರ ಸಂಜೆ ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೆ ಈ ಸಂಬಂಧ ಮತ್ತೊಬ್ಬ ಶಾಸಕ ಅನಮ್ ನಾಯಕ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮೂವರು ಶಾಸಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಾಗೃತ ದಳದ ಮೂಲಗಳು ತಿಳಿಸಿವೆ. ಅಲ್ಲದೆ ಕುಟುಕು ಕಾರ್ಯಾಚರಣೆ ನಡೆಸಿದ ವೆಬ್ ಚಾನೆಲ್ ಮಾಲೀಕ ರಬಿ ಶರ್ಮಾ ಅವರನ್ನು ಸಹ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.