

ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಮರನ್ನು ಓಟ್ ಬ್ಯಾಂಕ್ ನ್ನಾಗಿ ಪರಿಗಣಿಸಬಾರದು ಎಂದು ಕರೆ ನೀಡಿದ್ದಾರೆ.
ಮುಸ್ಲಿಂ ಸಮುದಾಯವನ್ನು ಮತ ಬ್ಯಾಂಕ್ ಆಗಿ ಪರಿಗಣಿಸಬಾರದು ಎಂಬುದಕ್ಕೆ 50 ವರ್ಷಗಳ ಹಿಂದೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಹೇಳಿದ್ದ ಮಾತುಗಳನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಸಮುದಾಯವನ್ನು ಮತ ಬ್ಯಾಂಕ್ ಆಗಿ ಪರಿಗಣಿಸಬೇಡಿ ಅಥವಾ ತೆಗಳಬೇಡಿ ಬದಲಾಗಿ ಆ ಸಮುದಾಯವನ್ನು ಸದೃಢಗೊಳಿಸಿ ಎಂದು ದೀನ್ ದಯಾಳ್ ಉಪಾಧ್ಯಾಯರು ಹೇಳಿದ್ದರು ಎಂದಿದ್ದಾರೆ.
ಇನ್ನು ಚುನಾವಣಾ ಪ್ರಕ್ರಿಯೆ ಬಗ್ಗೆಯೂ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಚುನಾವಣಾ ಪ್ರಕ್ರಿಯೆ ಸುಧಾರಣೆ ಇಂದಿನ ಪ್ರಮುಖ ಅಗತ್ಯವಾಗಿದ್ದು, ಈ ಬಗ್ಗೆ ಚರ್ಚಿಸಲು ದೇಶಾದ್ಯಂತ ವಿಚಾರ ಸಂಕಿರಣದ ವ್ಯವಸ್ಥೆಯಾಗಲಿ ಎಂದು ಕರೆ ನೀಡಿದ್ದಾರೆ. ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಭಾರತ ಮಹಾತ್ಮಾ ಗಾಂಧಿ ಅವರ ಜನ್ಮದಿನವಾದ ಅ.2 ರಂದು ಅನುಮೋದಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇದೆ ವೇಳೆ ತಿಳಿಸಿದ್ದಾರೆ.