

ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ವಿರುದ್ಧ ಸಿಡಿದೆದ್ದಿರುವ ಭಾರತ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಒಂಟಿಯಾಗಿಸಲು ರಾಜತಾಂತ್ರಿಕ ಒತ್ತಡ ಹೇರುತ್ತಿದ್ದರೆ, ಚೀನಾ ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ಭಾರತದ ಎನ್ ಎಸ್ ಜಿ ಕನಸನ್ನು ಮತ್ತೊಮ್ಮೆ ಭಗ್ನಗೊಳಿಸಲು ಯತ್ನಿಸುತ್ತಿದೆ ಎಂಬ ವರದಿಗಳು ಪ್ರಕಟವಾಗಿದೆ.
ಕಳೆದ ವಾರ ಪಾಕಿಸ್ತಾನದೊಂದಿಗೆ ಶಸ್ತ್ರಗಳ ನಿಯಂತ್ರಣ ಸಮಾಲೋಚನೆ ನಡೆಸಿರುವ ಚೀನಾ, ಪಾಕಿಸ್ತಾನದ ಎನ್ಎಸ್ ಜಿ ಸದಸ್ಯತ್ವದ ಅರ್ಜಿಯನ್ನು ಪರಿಗಣಿಸುವಂತೆ ಪರಮಾಣು ಪೂರೈಕೆದಾರ ಸಮೂಹಕ್ಕೆ ಹೇಳುವುದಾಗಿ ಭರವಸೆ ನೀಡಿದೆಯಂತೆ. ಭಾರತ ತನ್ನ ಎನ್ ಎಸ್ ಜಿ ಸದಸ್ಯತ್ವದ ವಿಚಾರವಾಗಿ ಚೀನಾದೊಂದಿಗೆ ಚರ್ಚೆ ನಡೆಸಿರುವ ಬೆನ್ನಲ್ಲೇ ಚೀನಾ ಪಾಕಿಸ್ತಾನದೊಂದಿಗೆ ನಡೆಸಿರುವ ಸಮಾಲೋಚನೆ ಮಹತ್ವ ಪಡೆದುಕೊಂಡಿದೆ.
ಚೀನಾ ಅಧಿಕಾರಿಗಳ ಮಾಹಿತಿ ಪ್ರಕಾರ, ಪಾಕಿಸ್ತಾನದೊಂದಿಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿರುವ ಚೀನಾ ಎನ್ ಪಿಟಿ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳಿಗೆ ಎನ್ ಎಸ್ ಜಿ ಸದಸ್ಯತ್ವ ನೀಡುವುದರ ಬಗ್ಗೆಯೂ ಚರ್ಚಿಸಿದೆ ಎನ್ನಲಾಗುತ್ತಿದೆ. ಅಚ್ಚರಿಯ ವಿಷಯವೆಂದರೆ ಭಾರತ-ಚೀನಾ ಮಾತುಕತೆ ನಂತರ ಬಿಡುಗಡೆ ಮಾಡಿದ್ದ ಹೇಳಿಕೆಯ ಯಥಾವತ್ ಹೇಳಿಕೆಯನ್ನು ಪಾಕಿಸ್ತಾನದೊಂದಿಗಿನ ಮಾತುಕತೆ ನಂತರ ಬಿಡುಗಡೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ಭಾರತದ ಎನ್ಎಸ್ ಜಿ ಕನಸನ್ನು ಎರಡನೇ ಬಾರಿ ಭಗ್ನಗೊಳಿಸಲು ಯತ್ನಿಸುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.