

ಉರಿ ಉಗ್ರ ದಾಳಿ ನಡೆದ 10 ದಿನಗಳಲ್ಲಿ ಭಾರತೀಯ ಸೇನೆ ಪ್ರತಿಕಾರ ತೀರಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ದಾಳಿ ನಡೆಸಲು ಭಾರತೀಯ ಸೇನೆಗೆ ಮುಕ್ತ ಹಸ್ತ ನೀಡಿದ ರಾಜಕೀಯ ನಿಲುವಿನ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕಠಿಣ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭಾರತ ಸರ್ಕಾರ ಹಿಂದೆಂದೂ ತೆಗೆದುಕೊಂಡಿಲ್ಲದೆ ಇರುವಂತಹ ಕಠಿಣ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಕಾರ್ಯತಂತ್ರದಲ್ಲಿ ಸ್ವಲ್ಪ ಎಡವಿದ್ದರೂ ಬಹುದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿದೆ.
ಅಪಾಯಕಾರಿ ನಿರ್ಧಾರಗಳ ಹೊರತಾಗಿಯೂ ಭಾರತೀಯ ಸೇನೆ ಯಶಸ್ಸು ಗಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಹಾಗೂ ಸೇನೆಗೆ ಈ ಕಾರ್ಯಾಚರಣೆಯಿಂದ ನೈತಿಕ ಸ್ಥೈರ್ಯ ಮತ್ತಷ್ಟು ಹೆಚ್ಚಿದಂತಾಗಿದೆ ಎಂದು ವಿಶ್ಲೇಷಕರು,
ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಸಹ ಪಾಕಿಸ್ತಾನದ ವಿಷಯದಲ್ಲಿ ಕೈಗೊಳ್ಳದಂತಹ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. 2001 ರಲ್ಲಿ ಸಂಸತ್ ಮೇಲೆ ಪಾಕ್ ಭಯೋತ್ಪಾದಕರಿಂದ ದಾಳಿ ನಡೆದಾಗಲೂ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಗಡಿ ನಿಯಂತ್ರಣ ರೇಖೆ ದಾಟಿ ಸೀಮಿತ ದಾಳಿ ನಡೆಸುವನಂತಹ ಕಠಿಣ ನಿರ್ಧಾರ ಕೈಗೊಂಡಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮೆಚ್ಚುಗೆ ದೇಶಾದ್ಯಂತ ವ್ಯಕ್ತವಾಗುತ್ತಿದೆ.