ಕಾಂಗ್ರೆಸ್ ಹಿರಿಯ ಮುಖಂಡ ಡಾ.ಎಕೆ ವಾಲಿಯಾ ರಾಜಿನಾಮೆ!

ದೆಹಲಿ ಮುನ್ಸಿಪಲ್ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕಾಂಗ್ರೆಸ್ ಪಕ್ಷಕ್ಕೆ ಆಘಾತ ಎದುರಾಗಿದ್ದು, ಪಕ್ಷದ ಹಿರಿಯ ಮುಖಂಡ ಡಾ.ಎಕೆ ವಾಲಿಯಾ ತಮ್ಮ ಸ್ಥಾನಕ್ಕೆ ಸೋಮವಾರ ರಾಜಿನಾಮೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ದೆಹಲಿ ಮುನ್ಸಿಪಲ್ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕಾಂಗ್ರೆಸ್ ಪಕ್ಷಕ್ಕೆ ಆಘಾತ ಎದುರಾಗಿದ್ದು, ಪಕ್ಷದ ಹಿರಿಯ ಮುಖಂಡ ಡಾ.ಎಕೆ ವಾಲಿಯಾ ತಮ್ಮ ಸ್ಥಾನಕ್ಕೆ ಸೋಮವಾರ ರಾಜಿನಾಮೆ ನೀಡಿದ್ದಾರೆ.

ಮೂಲಗಳ ಪ್ರಕಾರ ದೆಹಲಿ ಮುನ್ಸಿಪಲ್ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಮಾಡಿರುವ ಟಿಕೆಟ್ ಹಂಚಿಕೆಯೇ ವಾಲಿಯಾ ಅವರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಪಕ್ಷ ತಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ ಎಂದು  ವಾಲಿಯಾ ಆರೋಪಿಸಿದ್ದಾರೆ. "ನಿಷ್ಠಾವಂತ ಕಾರ್ಯಕರ್ತರ ತಳಮಟ್ಟದ ಪ್ರಯತ್ನವನ್ನು ಪಕ್ಷ ನಿರ್ಲಕ್ಷಿಸುತ್ತಿದೆ. ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇದು ಕಾರ್ಯಕರ್ತರ ಮೇಲೆ  ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ರತೀ ಚುನಾವಣೆಗೂ ಮುನ್ನ ಟಿಕೆಟ್ ಹಂಚಿಕೆ ಸಮಿತಿಯು ಟಿಕೆಟ್ ಆಕಾಂಕ್ಷಿಗಳ ಸಂದರ್ಶನ ನಡೆಸುತ್ತದೆ. ಅದು ಹೇಗಿರುತ್ತದೆ ಎಂದರೆ 8ನೇ ತರಗತಿ ವಿದ್ಯಾರ್ಥಿ ನಡೆಯುವ  ಸಂದರ್ಶನದಂತಿರುತ್ತದೆ. ನಮ್ಮ ಭಾವನೆಗಳಿಗೆ ಬೆಲೆಯೇ ನೀಡುವುದಿಲ್ಲ. ಹೀಗಾಗಿ ನಾನು ಪಕ್ಷಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ರಾಜಿನಾಮೆ ಬಳಿಕದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾವು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತೇವೆ. ಅಂತೆಯೇ ದೆಹಲಿಗಾಗಿ ಕೆಲಸ ಮಾಡುವ ಪರ್ಯಾಯ ಮಾರ್ಗಕ್ಕಾಗಿ ಆಲೋಚನೆ ನಡೆಸುತ್ತೇನೆ  ಎಂದೂ ಹೇಳಿದ್ದಾರೆ.

ಡಾ.ವಾಲಿಯಾ ಉತ್ತರ ದೆಹಲಿಯಲ್ಲಿ ಹೆಚ್ಚಿನ ಹಿಡಿತ ಹೊಂದಿದ್ದು, ವೃತ್ತಿಯಲ್ಲಿ ವೈದ್ಯರಾಗಿರುವ ಅವರು ದೆಹಲಿಯಲ್ಲಿ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್‌  ನಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. 2 ವರ್ಷಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಬಳಿಕ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿತ್ತು.

ದೆಹಲಿ ಮತ್ತೊರ್ವ ಕಾಂಗ್ರೆಸ್‌ ನಾಯಕ ಅಜಯ್ ಮಕೆನ್ ಹಾಗೂ ಡಾ. ವಾಲಿಯಾ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ನಾನು ಅವರಿಗೆ ಕರೆ ಮಾಡಿದರೂ ಅದಕ್ಕೆ ಅವರು ಉತ್ತರ ನೀಡುವುದಿಲ್ಲ ಎಂದು ವಾಲಿಯಾ ಈ ಹಿಂದೆ  ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು.

ಇದೇ ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನದಿಂದಾಗಿ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಪಕ್ಷವನ್ನು ತೊರೆದಿದ್ದು, ಮಾಜಿ ಡೆಪ್ಯೂಟಿ ಸ್ಪೀಕರ್ ಮತ್ತು ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಅಮ್ರೀಶ್ ಸಿಂಗ್ ಗೌತಮ್ ಕೂಡ  ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.  ಒಟ್ಟು 272 ವಾರ್ಡ್ ಗಳಿರುವ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಮೂರು ವಿಭಾಗಳಿದ್ದು, ಉತ್ತರ ಮತ್ತು ದಕ್ಷಿಣ ದೆಹಲಿ ವಿಭಾಗದಲ್ಲಿ ತಲಾ 104 ವಾರ್ಡ್ ಗಳು ಮತ್ತು ಪೂರ್ವ ದೆಹಲಿಯಲ್ಲಿ 64 ವಾರ್ಡ್ ಗಳಿವೆ. ಇದೇ ಏಪ್ರಿಲ್ 23ರಂದು ಎಂಸಿಡಿ ಚುನಾವಣೆ ನಡೆಯಲಿದ್ದು, ದೆಹಲಿಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲು ಎಲ್ಲ ಪಕ್ಷಗಳಿಗೆ ಇದೊಂದು ಅಗ್ನಿ ಪರೀಕ್ಷೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com