

ನವದೆಹಲಿ: ಖ್ಯಾತ ಅಂತಾರಾಷ್ಟ್ರೀಯ ನಿಯತಕಾಲಿಕೆ ಫೋರ್ಬ್ಸ್ ಬಿಡುಗಡೆ ಮಾಡಿರುವ 30 ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಒಲಿಂಪಿಕ್ಸ್ ಸಾಧಕರಾದ ದೀಪಾ ಕರ್ಮಾಕರ್, ಸಾಕ್ಷಿ ಮಲ್ಲಿಕ್ ಸೇರಿದಂತೆ 53 ಭಾರತೀಯರ ಸ್ಥಾನ ಪಡೆದಿದ್ದಾರೆ.
ಒಟ್ಟು 10 ವಿಭಾಗಗಳಲ್ಲಿ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಅಂದರೆ ಕ್ರೀಡೆ, ಮನರಂಜನೆ, ಹಣಕಾಸು ಮತ್ತು ಉದ್ಯಮ, ಬಂಡವಾಳ, ಚಿಲ್ಲರೆ, ಸಾಮಾಜಿಕ ಉದ್ಯಮಗಳು ಮತ್ತು ಉದ್ಯಮ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕಿಯರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಏಷ್ಯಾದ ಒಟ್ಟು 300 ಸಾಧಕರನ್ನು ಪಟ್ಟಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ 53 ಸಾಧಕರನ್ನು ಹೊಂದಿರುವ ಭಾರತ 2ನೇ ಸ್ಥಾನದಲ್ಲಿದ್ದರೆ, 76 ಸಾಧಕರನ್ನು ಹೊಂದಿರುವ ಚೀನಾ ಮೊದಲ ಸ್ಥಾನದಲ್ಲಿದೆ.
ರಿಯೋ ಒಲಿಂಪಿಕ್ಸ್ ನಲ್ಲಿ ಅಂತಿಮ ಘಟ್ಟದವರೆಗೂ ಭಾರತವನ್ನು ಪ್ರತಿನಿಧಿಸಿದ ಮೊದಲ ಮಹಿಳಾ ಸ್ಪರ್ಧಿ ಎಂಬ ಕೀರ್ತಿಗೆ ಭಾಜನರಾಗಿದ್ದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ರೆಸ್ಲರ್ ಸಾಕ್ಷಿ ಮಲ್ಲಿಕ್ ಕೂಡ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಕುಗ್ರಾಮದಲ್ಲಿ ಜನಸಿದ ಮಲ್ಲಿಕ್ ಗ್ರಾಮಸ್ಥರ ವಿರೋಧದ ನಡುವೆಯೇ ಕುಸ್ತಿ ಕಲಿತು ಇದೀಗ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದಿದ್ದಾರೆ ಎಂದು ಬಣ್ಣಿಸಲಾಗಿದೆ.
ಅಂತೆಯೇ ಮನರಂಜನಾ ಕ್ಷೇತ್ರದಿಂದ ನಟಿ ಆಲಿಯಾ ಭಟ್ ಸ್ಥಾನ ಪಡೆದಿದ್ದು, 20ಕ್ಕೂ ಹೆಚ್ಚು ಅಧಿಕ ಗಳಿಕೆ ಕಂಡ ಸಿನಿಮಾಗಳಲ್ಲಿ ಆಲಿಯಾ ಅಭಿನಯಿಸಿದ್ದಾರೆ ಎಂದು ಹೇಳಲಾಗಿದೆ. ಉಳಿದಂತೆ ಅರ್ಜುನ ಪ್ರಶಸ್ತಿ ವಿಜೇತ ಮತ್ತು 96 ಪದಕಗಳ ವಿಜೇತ ಸ್ವಿಮ್ಮರ್ ಶರತ್ ಗಾಯಕ್ವಾಡ್, ಶೀಸೆ ಸಂಸ್ಥಾಪಕಿ ತ್ರಿಶಾ ಶೆಟ್ಟಿ, ಫೀಡಿಂಗ್ ಇಂಡಿಯಾ ಸಂಸ್ಥೆ ಮೂಲಕ ಹಸಿದವರಿಗೆ ಅನ್ನ ನೀಡುತ್ತಿರುವ ಸಂಸ್ಥೆಯ ಸಂಸ್ಥಾಪಕಿ ಅಂಕಿತ್ ಕವಾತ್ರ, ಗೋಡೈಮೆನ್ಷನ್ ಸಂಸ್ಥಾಪಕ ಶ್ರವಣ್ ಕುಮಾರನ್ ಸೇರಿದಂತೆ ಒಟ್ಟು 53 ಮಂದಿ ಭಾರತೀಯರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.