ನವದೆಹಲಿ: ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಕೇಂದ್ರಗಳಲ್ಲ, ಅಲ್ಲಿ ಪುಸ್ತಕ, ಸಮವಸ್ತ್ರ ಹಾಗೂ ಇತರೆ ಲೇಖನ ಸಾಮಾಗ್ರಿಗಳ ಮಾರಾಟ ಮಾಡುವುದು ಕಾನೂನು ಬಾಹಿರವಾಗುತ್ತದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ಗುರುವಾರ ಕಠಿಣ ಎಚ್ಚರಿಕೆ ನೀಡಿದೆ.
ಕೆಲವು ಶಾಲೆಗಳು ಶಾಲಾ ಆವರಣದಲ್ಲಿಯೇ ನಿರ್ದಿಷ್ಟ ಮಾರಾಟಗಾರರಿಂದ ಪುಸ್ತಕ ಹಾಗೂ ಸಮವಸ್ತ್ರ ಮಾರಾಟದಂತಹ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಈ ಎಚ್ಚರಿಕೆ ನೀಡಿದೆ.
ಪೋಷಕರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸಿಬಿಎಸ್‌ಇ, ಶಾಲೆಗಳಲ್ಲಿ ಅಥವಾ ನಿರ್ದಿಷ್ಟ ವ್ಯಾಪಾರಿಗಳಲ್ಲಿಯೇ ಸಮವಸ್ತ್ರ, ಪುಸ್ತಕ, ಶೂ, ಬ್ಯಾಗ್ ಕೊಳ್ಳುವಂತೆ ಪೋಷಕರಿಗೆ ಒತ್ತಾಯ ಪಡಿಸುವುದನ್ನು ಕೂಡಲೇ ನಿಲ್ಲಸಬೇಕೆಂದು ಸೂಚಿಸಿದೆ.
ಸಿಬಿಎಸ್‌ಇ ಸಂಯೋಜಿತ ಶಾಲೆಗಳಲ್ಲಿ ಎನ್‌ಸಿಇಆರ್‌ಟಿ ಪುಸ್ತಕಗಳನ್ನೇ ಬಳಸುವಂತೆ ಸೂಚಿಸಲಾಗಿದೆ. ಕೆಲವು ಶಾಲೆಗಳು ಎನ್‌ಸಿಇಆರ್‌ಟಿ ಪುಸ್ತಕಗಳ ಬದಲಿಗೆ ಖಾಸಗಿ ಪ್ರಕಾಶಕರು ಪ್ರಕಟಿಸಿರುವ ಪುಸ್ತಕಗಳನ್ನು ಖರೀದಿಸುವಂತೆ ಮಕ್ಕಳ ಮತ್ತು ಪೋಷಕರನ್ನು ಒತ್ತಾಯಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಶಾಲೆಗಳು ಆನ್‌ಲೈನ್ ಮೂಲಕ ಎನ್‌ಸಿಇಆರ್‌ಟಿ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸುವಂತೆ ತಿಳಿಸಲಾಗಿದ್ದು, 2000 ಖಾಸಗಿ ಶಾಲೆಗಳಿಗೆ ಪುಸ್ತಕಗಳನ್ನು ರವಾನಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.