

ಚೆನ್ನೈ: ತಮಿಳುನಾಡು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಡಿಎಂಕೆ ಪಕ್ಷ ಕರೆಕೊಟ್ಟಿರುವ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ.
ಪ್ರಮುಖವಾಗಿ ಕಾವೇರಿ ಕೊಳ್ಳದ ಭಾಗದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇತ್ತ ತಿರವರೂರಿನಲ್ಲಿ ಸ್ಟಾಲಿನ್ ಮತ್ತು ಅವರ ಸಂಗಡಿಗರು ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು, ಈ ವೇಳೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಸ್ಟಾಲಿನ್ ರನ್ನು ಕೆಲ ಹೊತ್ತು ವಶಕ್ಕೆ ಪಡೆದಿದ್ದರು. ಬಳಿಕ ಬಿಡುಗಡೆ ಮಾಡಿದರು ಎಂದು ತಿಳಿದುಬಂದಿದೆ.
ಇತ್ತ ಚೆನ್ನೈನಲ್ಲಿ ರೈತರ ಪ್ರತಿಭಟನೆಗೆ ತಮಿಳುನಾಡು ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದ್ದು, ಚೆನ್ನೈನ ಅಣ್ಣಾ ಸಲೈ ರಸ್ತೆಯಲ್ಲಿ ಆಲ್ ಇಂಡಿಯಾ ಬ್ಯಾಂಕ್ ನೌಕರರ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿರು,
ತುರ್ತು ಅಗತ್ಯಗಳಾದ ಹಾಲು, ಔಷಧಿ ವಸ್ತುಗಳನ್ನು ಹೊರತು ಪಡಿಸಿ ವಿವಿಧ ಎಲ್ಲ ವಿಭಾಗಗಳ ಮೇಲೂ ಬಂದ್ ಬಿಸಿ ಮುಟ್ಟಿದ್ದು, ಆ್ಯಂಬುಲೆನ್ಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಅಂಗಡಿಗಳು ಸ್ಥಳೀಯ ಮಾರುಕಟ್ಟೆಗಳು, ಮಾಲ್ ಗಳು ಮತ್ತು ಶಾಲಾ-ಕಾಲೇಜುಗಳು ಬಂದ್ ಆಗಿದ್ದು, ಖಾಸಗಿ ಸಂಸ್ಥೆಗಳೂ ಕೂಡ ಬಂದ್ ಆಗಿವೆ. ಕೆಲವೇ ಸಂಖ್ಯೆಗಳಲ್ಲಿ ಆಟೋ ರಿಕ್ಷಾ ಮತ್ತು ಕೆಲ ಟ್ಯಾಕ್ಸಿಗಳು ಮಾತ್ರ ರಸ್ತೆಗಳಿದಿವೆ.ಇದನ್ನು ಹೊರತು ಪಡಿಸಿ ತಮಿಳುನಾಡು ಸರ್ಕಾರಿ ಬಸ್ ಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ ಎಂದು ತಿಳಿದುಬಂದಿದೆ.
ಇನ್ನು ಮುಂಜಾಗ್ರತಾ ಕ್ರಮವಾಗಿ ಚೆನ್ನೈ ಸೇರಿದಂತೆ ತಮಿಳುನಾಡಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಡಿಎಂಕೆ ಕರೆ ನೀಡಿರುವ ಬಂದ್ ಗೆ ಆಡಳಿತಾ ರೂಢ ಎಐಎಡಿಎಂಕೆ, ಬಿಜೆಪಿ, ಎಂಡಿಎಂಕೆ, ಟಿಎಂಸಿ ಪಕ್ಷಗಳು ಬೆಂಬಲ ನೀಡಿಲ್ಲ. ಏಪ್ರಿಲ್ 16ರಂದು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಎಂಕೆ ಸ್ಟಾಲಿನ್ ತಮಿಳುನಾಡು ಬಂದ್ ಗೆ ಕರೆ ನೀಡಿದ್ದರು.