ನವದೆಹಲಿ: ಯಾವುದೇ ನಿರ್ಧಾರ ಕೈಗೊಳ್ಳಲು ಜೆಡಿಯು ನಾಯಕ ಶರದ್ ಯಾದವ್ ಗೆ ಎಲ್ಲಾ ರೀತಿಯ ಸ್ವಾತಂತ್ರ್ಯವಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಜೆಡಿಯು ಮತ್ತು ಬಿಜೆಪಿ ಮೈತ್ರಿಗೆ ಶರದ್ ಯಾದವ್ ವಿರೋಧ ವ್ಯಕ್ತ ಪಡಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ನೀತೀಶ್ ಕುಮಾರ್, ಎಲ್ಲಿಗೆ ಬೇಕಾದರೂ ಹೋಗಲು, ಯಾವುದೇ ದಾರಿ ಆಯ್ಕೆ ಮಾಡಿಕೊಳ್ಳಲು ಶರದ್ ಯಾದವ್ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ತಿಳಿಸಿದ್ದಾರೆ.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಎಲ್ಲರ ಒಮ್ಮತದೊಂದಿಗೆ ಪಕ್ಷ ನಿರ್ಧಾರ ಕೈಗೊಳ್ಳಲಿದೆ, ಹಾಗೆಯೇ ಅವರ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಹಕ್ಕಿದೆ ಎಂದು ಹೇಳಿದ್ದಾರೆ.
ಜೆಡಿಯು ಮಾಜಿ ಅಧ್ಯಕ್ಷ ಶರದ್ ಯಾದವ್ ತಾವು ಇನ್ನೂ ಮಹಾ ಘಟಬಂಧನ್ ಜೊತೆಯಲ್ಲಿಯೇ ಇರುವುದಾಗಿ ಹೇಳಿದ ಬೆನ್ನಲ್ಲೇ ನಿತೀಶ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ, 2015 ರ ಚುನಾವಣೆಯಲ್ಲಿ 11 ಕೋಟಿ ಮಂದಿ ನೀಡಿರುವ ಜನಾದೇಶಕ್ಕೆ ನಾನು ಬದ್ದನಾಗಿದ್ದೇನೆ ಎಂದು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಶರದ್ ಯಾದವ್ ಹೇಳಿದ್ದರು.
ಕಳೆದ ತಿಂಗಳು ನಿತೀಶ್ ಕುಮಾರ್ ಆರ್ ಜೆಡಿ ಜೊತೆಗಿನ ಮೈತ್ರಿ ಮುರಿದುಕೊಂಡು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ, ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನಿತೀಶ್ ನಡೆಗೆ ಶರದ್ ಯಾದವ್ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು.