ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್: ಯೋಧನೊಂದಿಗೆ ತಂದೆಗೂ ಗಾಯ
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಅಪ್ರಚೋದಿತ ಗುಂಡಿನ ದಾಳಿಗೆ ಯೋಧರ ಸೇರಿ ಅವರ ತಂದೆ ಕೂಡ ಗಾಯಗೊಂಡಿರುವ ಘಟನೆ...
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಅಪ್ರಚೋದಿತ ಗುಂಡಿನ ದಾಳಿಗೆ ಯೋಧರ ಸೇರಿ ಅವರ ತಂದೆ ಕೂಡ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ಕಳೆದ ಐದು ದಿನಗಳಿಂದಲೂ ಪಾಕಿಸ್ತಾನ ಸೇನೆ ನೌಶೆರಾ ಸೆಕ್ಟರ್ ಬಳಿ ಕದನ ವಿರಾಮವನ್ನು ಉಲ್ಲಂಘನೆ ಮಾಡಿದ್ದು, ಇಂದೂ ಕೂಡ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪರಿಣಾಮ ಯೋಧ ಸೇರಿ ಅವರ ತಂದೆಗೆ ಗಾಯಗಳಾಗಿವೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.
ಇದರೊಂದಿಗೆ ಪೂಂಚ್ ಸೆಕ್ಟರ್ ಬಳಿಯಿರುವ ಗಡಿನಿಯಂತ್ರಣ ರೇಖೆ ಬಳಿಯೂ ಪಾಕಿಸ್ತಾನ ಭಾರತೀಯ ಸೇನಾ ಯೋಧರನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡು ಹಾಗೂ ಸಣ್ಣ ಶಸ್ತ್ರಾಸ್ತ್ರಗಳ ಮೂಲದ ದಾಳಿ ನಡೆಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 12 ರಂದು ಪಾಕಿಸ್ತಾನ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಓರ್ವ ಮಹಿಳಾ ನಾಗರೀಕರೊಬ್ಬರು ಮೃತಪಟ್ಟಿದ್ದರು. ಆ.13 ರಂದು ಕೃಷ್ಣಘಾಟಿ, ಮನ್ಕೊಟ್, ನೌಶೆರಾ ಮತ್ತು ಉರಿ ಸೆಕ್ಟರ್ ಬಳಿ ನಾಲ್ಕು ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಈ ವೇಳೆ ಮೂವರು ಯೋಧರಿಗೆ ಗಾಯಗಳಾಗಿತ್ತು.
ಆ.14 ರಂದು ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪಾಕಿಸ್ದಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಆ.15 ರಂದು ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ ಬಳಿ ಪಾಕಿಸ್ತಾನ ನಡೆಸಿದ್ದ ಶೆಲ್ ದಾಳಿಗೆ ಮಹಿಳಾ ನಾಗರೀಕರೊಬ್ಬರಿಗೆ ಗಾಯವಾಗಿತ್ತು.