ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಣೆ ನೀಡುವ ರಷ್ಯಾ ಮೂಲದ ಅಪಾಯಕಾರಿ ಅನ್ ಲೈನ್ ಆಟವಾಗಿರುವ 'ಬ್ಲೂವೇಲ್ ಚಾಲೆಂಜ್' ಕುರಿತು ಆನ್ ಲೈನ್ ಹುಡುಕಾಟದಲ್ಲಿ ಕೋಲ್ಕತಾ ವಿಶ್ವದಲ್ಲಿಯೇ ಮೊದಲ ಸ್ಥಾನವನ್ನು...
ನವದೆಹಲಿ: ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಣೆ ನೀಡುವ ರಷ್ಯಾ ಮೂಲದ ಅಪಾಯಕಾರಿ ಅನ್ ಲೈನ್ ಆಟವಾಗಿರುವ 'ಬ್ಲೂವೇಲ್ ಚಾಲೆಂಜ್' ಕುರಿತು ಆನ್ ಲೈನ್ ಹುಡುಕಾಟದಲ್ಲಿ ಕೋಲ್ಕತಾ ವಿಶ್ವದಲ್ಲಿಯೇ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದರೆ, ನಮ್ಮ ಸಿಲಿಕಾನ್ ಸಿಟಿ 6ನೇ ಸ್ಥಾನವನ್ನು ಪಡೆದುಕೊಂಡಿದೆ ಎಂಬ ಅತಂಕಕಾರಿ ಅಂಕಿ-ಅಂಶಗಳು ಲಭ್ಯವಾಗಿದೆ.
12 ತಿಂಗಳಲ್ಲಿ ವಿಶ್ವದ 30 ಪ್ರಮುಖ ನಗರಗಳಲ್ಲಿ ಬ್ಲೂವೇಲ್ ಬಗ್ಗೆ ನಡೆದ ಹುಡುಕಾಟದ ಕುರಿತು 'ಗೂಗಲ್ ಟ್ರೆಂಡ್ಸ್' ಮಾಹಿತಿ ನೀಡಿದೆ.
ಇದರಲ್ಲಿ ಕೋಲ್ಕತಾ ಮೊದಲ ಸ್ಥಾನದಲ್ಲಿದ್ದರೆ ವಿಶ್ವದ ಟಾಪ್ 5ರಲ್ಲಿ 3ನೇ ಸ್ಥಾನ ಭಾರತೀಯ ನಗರಗಳ ಪಾಲಾಗಿವೆ. ಇನ್ನು ದೇಶಗಳ ಪಟ್ಟಿಯನ್ನು ಗಮನಿಸಿದರೆ ಭಾರತ 3ನೇ ಸ್ಥಾನವನ್ನು ಪಡೆದುಕೊಂಡಿದೆ.
ಕೋಲ್ಕತಾ ನಂತರದ ಸ್ಥಾನದಲ್ಲಿ ಅಮೆರಿಕಾದ ಸ್ಯಾನ್ ಫ್ಲಾನ್ಸಿಸ್ಕೋ, ಕೀನ್ಯಾದ ನೈರೋಬಿ, ಅಸ್ಸಾಂ ರಾಜ್ಯದ ಗುವಾಹಟಿ, ತಮಿಳುನಾಡಿನ ಚೆನ್ನೈ, ಕರ್ನಾಟಕದ ಬೆಂಗಳೂರು, ಮಹಾರಾಷ್ಟ್ರದ ಮುಂಬೈ, ದೇಶದ ರಾಜಧಾನಿ ನವದೆಹಲಿ, ಪಶ್ಚಿಮ ಬಂಗಾಳದ ಹೌರಾ ಮತ್ತು ಫ್ರಾನ್ಸ್'ನ ಪ್ಯಾರಿಸ್ ಇವೆ.
ಆನ್ ಲೈನ್ ಹುಡುಕಾಟದಲ್ಲಿ ಬ್ಲೂವೇಲ್ ಚಾಲೆಂಜ್ ಗೇಮ್, 'ದ ವೇಲ್ ಗೇಮ್', ಬ್ಲೂವೇಲ್ ಗೇಮ್ ಡೌನ್ ಲೋಡ್, ಬ್ಲೂವೇಲ್ ಎಪಿಕೆ, ಬ್ಲೂವೇಟ್ ಸೂಸೈಡ್ ಚಾಲೆಂಜ್ ಇತರ ವಿಷಯಗಳು ಹೆಚ್ಚು ಪ್ರಾಧಾನ್ಯ ಪಡೆದಿವೆ.
ಇನ್ನು ಭಾರತದ ನಗರಗಳನ್ನಷ್ಟೇ ಗಮನಿಸಿದರೆ ಕಳೆದ 1 ತಿಂಗಳಿನಲ್ಲಿ ಕೋಲ್ಕತಾ, ಗುವಾಹಟಿ, ಚೆನ್ನೈ, ಮುಂಬೈ ಮತ್ತು ಬೆಂಗಳೂರು ಕ್ರಮವಾಗಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡಿವೆ.
ಇತ್ತೀಚೆಗೆ ಭಾರತದಲ್ಲಿ ಈ ಅಪಾಯಕಾರಿ ಆಟದಿಂದಾಗಿ ಯುವಕರ ಸಾವು ಹೆಚ್ಚಾಗಿದ್ದು, ಆ ಬಳಿಕ ಆನ್ ಲೈನ್ ಹುಡುಕಾಟ ಮತ್ತಷ್ಟು ತೀವ್ರಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮಗಳು ಮತ್ತು ಆನ್ ಲೈನ್ ಜಾಲತಾಣಗಳಿಗೆ ಕೇಂದ್ರ ಸರ್ಕಾರವು ಬ್ಲೂವೇಲ್ ಆಟ ಇಂಟರ್ನೆಟ್ ನಲ್ಲಿ ಲಭ್ಯ ಇರದಂತೆ ನೋಡಿಕೊಳ್ಳಬೇಕಿದೆ.
ಏನಿದು ಬ್ಲೂವೇಲ್ ಗೇಮ್?
ಬ್ಲೂ ವೇಲ್ ಒಂದು ಆನ್ ಲೈನ್ ಗೇಮ್ ಆಗಿದ್ದು, ಇದರಲ್ಲಿ ಸವಾಲು ಸ್ವೀಕರಿಸಿದವರಿಗೆ ದಿನಕ್ಕೊಂದು ಟಾಸ್ಕ್ ನೀಡಲಾಗುತ್ತದೆ. ಸವಾಲು ಸ್ವೀಕರಿಸುವಾಗ ಕಡೆಯಲ್ಲಿ ನೀವು ಸಾಯಬೇಕಾಗುತ್ತದೆ ಎಂದು ಸೂಚಿಸಲಾಗುತ್ತದೆ. ಮಾನಸಿಕವಾಗಿ ದುರ್ಬಲ ಮಕ್ಕಳನ್ನೇ ಗೇಮ್ ನತ್ತ ಸೆಳೆಯಲಾಗುತ್ತದೆ. ಒಂದು ವೇಳೆ, ಮಕ್ಕಳು ಮಧ್ಯದಲ್ಲಿ ಹಿಂದೆ ಸರಿಯಲು ಯತ್ನಿಸಿದರೆ, ನಿಮ್ಮ ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ನಮ್ಮವರು ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಹೆದರಿಸಲಾಗುತ್ತದೆ.
ಇದನ್ನು ಒಪ್ಪಿದವರಿಗೆ ದಿನಕ್ಕೊಂದರಂತೆ 50 ದಿನ ಹೊಸ ಟಾಸ್ಕ್ ನೀಡಲಾಗುತ್ತದೆ. ರಾತ್ರಿ ಏಳುವುದು, ಭಯಾನಕ ಚಿತ್ರ ನೋಡುವುದು, ನರ ಕತ್ತರಿಸಿಕೊಳ್ಳುವುದು ಹೀಗೆ ನಾನು ಕಠಿಣ ಟಾಸ್ಕ್ ಗಳು ಇರುತ್ತದೆ. 50ನೇ ದಿನ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ. ಈ ಭಯಾನಕ ಗೇಮ್ ನಿಂದಾಗಿ ಯುರೋಪ್ ಮತ್ತು ರಷ್ಯಾದಾದ್ಯಂತ ಈ ವರೆಗೂ ಸುಮಾರು 150 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಇದೇ ಗೇಮ್ ಭಾರತೀಯರನ್ನೂ ಭೀತಿಗೊಳಗಾಗುವಂತೆ ಮಾಡುತ್ತಿದೆ.