ಚಂಡೀಗಢ: ಕಳೆದ ವರ್ಷ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಭಾಗಿಯಾಗಿದ್ದ ಪ್ಯಾರಾಟ್ರೂಪರ್, ಬೇರೆ ಸೇನಾ ಕಾರ್ಯಚರಣೆಯಂತೆ ಇದು ಕೂಡ ಇನ್ನೊಂದು ಕಾರ್ಯಚರಣೆಯಷ್ಟೆ ಎಂದು ಹೇಳಿದ್ದಾರೆ.
ವಿಶೇಷ ಕಾರ್ಯಪಡೆಯ 4ನೇ ಘಟಕದ ನಾಯಕ-ಶ್ರೇಣಿಯ ಅಧಿಕಾರಿ, ಪಾಕಿಸ್ತಾನಕ್ಕೆ ತಕ್ಕ ಸಂದೇಶವನ್ನು ನೀಡಲು ಸರ್ಜಿಕಲ್ ಸ್ಟ್ರೈಕ್ ನ್ನು ಯೋಜನೆ ಮಾಡಿ ಮಾಡಲಾಯಿತು. ಭಾರತೀಯ ಸೇನೆ ಅದನ್ನು ಸರಿಯಾಗಿಯೇ ಮಾಡಿದೆ ಎಂದು ಹೇಳಿದರು.
2016ರ ಸೆಪ್ಟೆಂಬರ್ 28 ಮತ್ತು 29ರಂದು ಮಧ್ಯರಾತ್ರಿಯಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಉಗ್ರಗಾಮಿಗಳ ಲಾಂಚ್ ಪ್ಯಾಡ್ ಮೇಲೆ ಭಾರತ ಸೇನೆ ಸರ್ಜಿಕಲ್ ಸ್ಟ್ರೈಕ್ ನ್ನು ನಡೆಸಿತ್ತು.ಕಾಶ್ಮೀರದ ಮೂಲಕ ಪಾಕಿಸ್ತಾನದಿಂದ ಒಳನುಸುಳಲು ಯತ್ನಿಸುತ್ತಿದ್ದ ಉಗ್ರಗಾಮಿಗಳನ್ನು ಸೇನೆ ಎದುರಿಸಿ ಸಮರ್ಥವಾಗಿ ಸದೆಬಡಿಯಿತು.
ಜಮ್ಮು-ಕಾಶ್ಮೀರದ ಉರಿಯಲ್ಲಿ ಸೇನಾ ಶಿಬಿರದ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿ 19 ಜವಾನರು ಹುತಾತ್ಮರಾದ ಎರಡು ವಾರಗಳ ನಂತರ ಸರ್ಜಿಕಲ್ ಸ್ಟ್ರೈಕ್ ನಡೆಯಿತು.
ಈ ಬಗ್ಗೆ ಮಿಲಿಟರಿ ಸಾಹಿತ್ಯ ಉತ್ಸವದಲ್ಲಿ ನಿನ್ನೆ ತಮ್ಮ ಅನುಭವಗಳನ್ನು ಹಂಚಿಕೊಂಡ ಅಧಿಕಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲು ತಮ್ಮ ತಂಡ 10 ದಿನಗಳಲ್ಲಿ ಯೋಜನೆ ಮಾಡಿ ತಯಾರಿ ನಡೆಸಿತು ಎಂದರು.
ಇದೊಂದು ಬೃಹತ್ ಮಟ್ಟದ ಕಾರ್ಯಾಚರಣೆ. ಒಂದು ಬಾರಿ ನಮಗೆ ಅನುಮತಿ ಸಿಕ್ಕಿದ ಕೂಡಲೇ ಸಾಮಾನ್ಯರಂತಯೇ ನಾವು ಸರ್ಜಿಕಲ್ ಸ್ಟ್ರೈಕ್ ಗೆ ತಯಾರಿ ನಡೆಸಿದೆವು.
ಪ್ರಾಮಾಣಿಕವಾಗಿ ಹೇಳಬೇಕೆಂದರೆ ಬೇರೆ ಕಾರ್ಯಾಚರಣೆಯಂತೆ ಇದು ಕೂಡ ನಮಗೆ ಮತ್ತೊಂದು ಕಾರ್ಯಾಚರಣೆಯಾಗಿತ್ತಷ್ಟೆ. ಆದರೆ ಇದು ದೊಡ್ಡ ಮಟ್ಟದಲ್ಲಾಗಿತ್ತು. ಇಲ್ಲಿ ಸೇನಾ ಶಕ್ತಿ ದೊಡ್ಡದಿತ್ತು. ಇಲ್ಲಿ ಆದ ನಷ್ಟ ಮತ್ತು ತಿಕ್ಕಾಟ ಇತರ ಕಾರ್ಯಾಚರಣೆಗಿಂತ ಹೆಚ್ಚಾಗಿತ್ತು ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.