ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸುದ್ದಿ ವಾಹಿನಿಯೊಂದಕ್ಕೆ ಸಂಕಷ್ಟ ಎದುರಾಗಿದೆ.
ಗುಜರಾತ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಗುಜರಾತ್ ನ ಸ್ಥಳೀಯ ಟಿವಿ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದು ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದ್ದು ಈ ಸಂಬಂಧ ರಾಹುಲ್ ಗಾಂಧಿಗೆ ಆಯೋಗ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಡಿಸೆಂಬರ್ 18ರೊಳಗೆ ಸ್ಪಷ್ಟನೆ ನೀಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಸೂಚಿಸಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ನಿಮ್ಮ ವಿರುದ್ಧ ಯಾಕೆ ಕ್ರಮಕೈಗೊಳ್ಳಬಾರದು ಎಂದು ಆಯೋಗ ಪ್ರಶ್ನಿಸಿದೆ.
ಇನ್ನು ರಾಹುಲ್ ಗಾಂಧಿ ಸಂದರ್ಶನ ಪ್ರಸಾರ ಮಾಡಿದ ಟಿವಿ ಚಾನೆಲ್ ವಿರುದ್ಧವೂ ಎಫ್ಐಆರ್ ದಾಖಲಿಸಲು ಕೇಂದ್ರ ಚುನಾವಣಾ ಆಯೋಗ ಗುಜರಾತ್ ಚುನಾವಣಾಧಿಕಾರಿಗಳಿಗೆ ಸೂಚಿಸಿದೆ.
ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನಲೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ.