ನವದೆಹಲಿ: ಲೆದರ್ ಹಾಗೂ ಪಾದರಕ್ಷೆ ಉದ್ಯಮದಲ್ಲಿ ಉದ್ಯೋಗ ಸೃಷ್ಟಿಗೆ ನೆರವಾಗುವಂತೆ 2,600 ಕೋಟಿ ರೂ ಪ್ಯಾಕೇಜ್ ನೀಡುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಉದ್ಯಮ ಇನ್ನು ಮೂರು ವರ್ಷಗಳಲ್ಲಿ 3.24 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರದ ಇಂಡಿಯನ್ ಫುಟ್ ವೇರ್, ಲೆದರ್ ಪರಿಕರಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದೂ ಈ ಪ್ಯಾಕೇಜ್ ನ ಉದ್ದೇಶವಾಗಿದೆ.
ಈ ಯೋಜನೆಯಿಂದಾಗಿ ಲೆದರ್ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಯಾಗಲಿದ್ದು, ಲೆದರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇರುವ ಪರಿಸರ ಆತಂಕಗಳನ್ನು ಬಗೆಹರಿಯುವ ವಿಶ್ವಾಸವಿದೆ ಎಂದು ಸರ್ಕಾರ ತಿಳಿಸಿದೆ. ಪಾದರಕ್ಷೆ ಹಾಗೂ ಲೆದರ್ ಕ್ಷೇತ್ರದಲ್ಲಿನ ಬೃಹತ್ ಹೂಡಿಕೆಗೆ ತೆರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.