

ಚೆನ್ನೈ: ಎಐಎಡಿಂಕೆ ಪಕ್ಷವನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹೇಳಿದ್ದಾರೆ.
ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಕಳೆದ ರಾತ್ರಿ ನಡೆ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಆಡಳಿತಾ ರೂಢ ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಈ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಸಲಾಗಿದೆ. ಸಭೆ ಬಳಿಕ ಮಾತನಾಡಿದ ಶಶಿಕಲಾ, ಯಾರಿಂದಲೂ ಪಕ್ಷವನ್ನು ಒಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಶಶಿಕಲಾ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡುವ ಸಲುವಾಗಿ ಸಿಎಂ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದ ಒ ಪನ್ನೀರ್ ಸೆಲ್ವಂ, ರಾತ್ರೋ ರಾತ್ರಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಅಲ್ಲದೆ ಪಕ್ಷ ಮತ್ತು ಪಕ್ಷದ ಕಾರ್ಯಕರ್ತರು ಬಯಸಿದರೆ ಮುಖ್ಯಮಂತ್ರಿಯಾಗಿ ತಾವು ಮುಂದುವರೆಯುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಜಯ ಸಾವಿನ ಕುರಿತೂ ಸಂಶಯ ವ್ಯಕ್ತಪಡಿಸಿದ ಪನ್ನೀರ್ ಸೆಲ್ವಂ ಈ ಬಗ್ಗೆ ತನಿಖೆ ನಡೆಸುವುದಾಗಿಯೂ ಹೇಳುವ ಮೂಲಕ ಶಶಿಕಲಾ ಬಣದ ವಿರುದ್ಧ ನೇರವಾಗಿ ತೊಡೆ ತಟ್ಟಿ ನಿಂತಿದ್ದಾರೆ.
ಇನ್ನು ಪನ್ನೀರ್ ಸೆಲ್ವಂ ಬಣದಿಂದ ಭಿನ್ನಮತ ಸ್ಫೋಟವಾಗುತ್ತಿದ್ದಂತೆಯೇ ಇತ್ತ ಸಿಎಂ ಹುದ್ದೆಯ ಕನಸು ಕಾಣುತ್ತಿದ್ದ ಶಶಿಕಲಾ, ತಮ್ಮ ಬೆಂಬಲಿಗ ಶಾಸಕರ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿದ ಅವರು ಯಾರಿಂದಲೂ ಪಕ್ಷವನ್ನು ಒಡೆಯಲು ಸಾಧ್ಯವಿಲ್ಲ. ಪಕ್ಷದ ಎಲ್ಲ ಶಾಸಕರು ಒಗ್ಗಟ್ಟಾಗಿದ್ದು, ಮುಂದೆಯೂ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲ ಪೋಯಸ್ ಗಾರ್ಡನ್ ನಲ್ಲಿರುವ ಜಯಾ ನಿವಾಸದಲ್ಲಿ ನಡೆದ ಸುಧೀರ್ಘ ಸಭೆ ಬಳಿಕ ಶಶಿಕಲಾ ಮಾತನಾಡಿದ್ದರು.
ಶಶಿಕಲಾ ಬಣದ ಶಾಸಕರ ರೆಸಾರ್ಟ್ ಪಯಣ
ಏತನ್ಮಧ್ಯೆ ಪನ್ನೀರ್ ಸೆಲ್ವಂ ಅವರು ತಮಗೆ ಬಹುಮತವಿದ್ದು, ತಾವು ಸಿಎಂ ಸ್ಥಾನದಿಂದ ಕೆಳಗಿಳಿಯುವುದಿಲ್ಲ ಎಂಬ ಧೋರಣೆ ತೋರುತ್ತಲೇ, ಶಶಿಕಲಾ ಮತ್ತು ಅವರ ಬಣದ ಶಾಸಕರು ರೆಸಾರ್ಟ್ ನತ್ತ ಪಯಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 134 ಶಾಸಕರು ಖಾಸಗಿ ಬಸ್ ನಲ್ಲಿ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.