

ಚೆನ್ನೈ: ರಾತ್ರೋ ರಾತ್ರಿ ಸಂಭವಿಸಿದ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ತಮಿಳುನಾಡಿನ ರಾಜ್ಯ ರಾಜಕೀಯದಲ್ಲಿ ಅಲ್ಲೋಲ್ಲ ಕಲ್ಲೋಲವಾಗಿದ್ದು, ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ಖಜಾಂಚಿ ಸ್ಥಾನದಿಂದ ಕಿತ್ತೊಗೆಯಲಾಗಿದೆ. ಅಲ್ಲದೆ ಪಕ್ಷದಿಂದಲೂ ಉಚ್ಛಾಟನೆ ಮಾಡುವ ಕುರಿತು ಮಾತುಗಳು ಕೇಳಿಬರುತ್ತಿವೆ.
ಇಂದು ಸಂಜೆ ಚೆನ್ನೈನ ಪೋಯಸ್ ಗಾರ್ಡನ್ ನಲ್ಲಿ ನಡೆದ ಬೆಂಬಲಿತ ಶಾಸಕರ ಸಭೆ ಬಳಿಕ ಪನ್ನೀರ್ ಸೆಲ್ವಂ ಅವರನ್ನು ಖಜಾಂಚಿ ಸ್ಥಾನದಿಂದ ಕೈ ಬಿಡಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ತಿಳಿಸಿದ್ದಾರೆ. ಅಂತೆಯೇ ಪಕ್ಷದ ಮುಖಂಡ ಸಿಂಘೈ ಜಿ ರಾಮಚಂದ್ರನ್ ಅವರನ್ನು ಅವರ ಸ್ಥಾನದಿಂದಷ್ಟೇ ಅಲ್ಲದೇ ಪಕ್ಷದಿಂದಲೇ ಉಚ್ಛಾಟಿಸಲಾಗಿದೆ. ಅಲ್ಲದೆ ರಾಮಚಂದ್ರನ್ ಅವರ ಸಹಾಯಕ ಹರಿ ಪ್ರಭಾಕರನ್ ಅವರನ್ನೂ ಕೂಡ ಉಚ್ಚಾಟಿಸಲಾಗಿದೆ ಎಂದು ಶಶಿಕಲಾ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಈ ಇಬ್ಬರೂ ನಾಯಕರು ಪನ್ನೀರ್ ಸೆಲ್ವಂ ಅವರ ಆಪ್ತರಾಗಿದ್ದು, ಈ ಹಿಂದೆ ಬಹಿರಂಗವಾಗಿಯೇ ಪನ್ನೀರ್ ಸೆಲ್ವಂ ಅವರ ಪರವಾಗಿ ಹೇಳಿಕೆ ನೀಡಿದ್ದರು.
ಪನ್ನೀರ್ ಸೆಲ್ವಂ ಉಚ್ಛಾಟನೆ?
ಇದೇ ವೇಳೆ ಶಶಿಕಲಾ ವಿರುದ್ಧ ಬಂಡಾಯವೆದ್ದಿರುವ ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡುವ ಕುರಿತು ಮಾತುಗಳು ಕೇಳಿಬಂದಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳನ್ನು ಆಧರಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ. ಇನ್ನು ಪಕ್ಷದ ಐಟಿ ವಿಂಗ್ ಮುಖ್ಯಸ್ಥ ವಿವಿಆರ್ ರಾಜನ್ ಅವರನ್ನೂ ಕೂಡ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿವಿಆರ್ ರಾಜನ್ ಪನ್ನೀರ್ ಸೆಲ್ವಂ ಬಣದಲ್ಲಿ ಗುರುತಿಸಿಕೊಂಡಿದ್ದರು.