

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿಯವರನ್ನು ಬಿಜೆಪಿ ಟೀಕಿಸಿದ್ದು, 'ಅರೆಕಾಲಿಕ ರಾಜಕಾರಣಿ'ಯನ್ನು ನಿರ್ಲಕ್ಷಿಸುವುದೇ ಉತ್ತಮ ಎಂದು ಶನಿವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಎಸ್. ಪ್ರಕಾಶ್ ಅವರು, ದೇಶದ ರಾಜಕೀಯ ಬೆಳವಣಿಗಳ ಬಗ್ಗೆ ಅರಿವಿಲ್ಲದ ಹಾಗೂ ಅರೆಕಾಲಿಕ ರಾಜಕಾರಣಿಯಾಗಿರುವ ಪ್ರಿಯಾಂಕಾ ಗಾಂಧಿಯವರನ್ನು ನಿರ್ಲಕ್ಷಿಸುವುದೇ ಉತ್ತಮ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಪ್ರಿಯಾಂಕಾ ಗಾಂಧಿಯವರು ಶುಕ್ರವಾರ ಕೈಜೋಡಿಸಿದ್ದರು. ನೋಟು ನಿಷೇಧ ನಿರ್ಧಾರದಿಂದಾಗಿ ಸಾಮಾನ್ಯ ಹಾಗೂ ಬಡವರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.
ಈ ಹಿನ್ನಲೆಯಲ್ಲಿ ಪ್ರಿಯಾಂಕಾ ಗಾಂಧಿಯವರ ವಿರುದ್ಧ ಪ್ರಕಾಶ್ ಅವರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಪ್ರಚಾರಕರು ಹಾಗೂ ಅರೆಕಾಲಿಕ ರಾಜಕಾರಣಿಗಳಿಗೆ ನೋಟು ನಿಷೇಧದ ನಿಜವಾದ ಪರಿಣಾಮಗಳು ಅರ್ಥವಾಗುವುದಿಲ್ಲ. ಹೀಗಾಗಿಯೇ ಅವರು ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಪ್ಪುಹಣ ಇಟ್ಟುಕೊಂಡವರ ಮೇಲಷ್ಟೇ ನೋಟು ನಿಷೇಧ ಪರಿಣಾಮ ಬೀರಿದೆ. ದೇಶದ ರಾಜಕೀಯದಲ್ಲಿ ಏನಾಗುತ್ತಿದೆ ಎಂಬುದರ ಅರಿವೇ ಇಲ್ಲದೆಯೇ ಚುನಾವಣೆ ಬಂದಾಗ ಮಾತ್ರ ಬಂದು ಪ್ರಿಯಾಂಕಾ ಗಾಂಧಿಯವರು ಹೇಳಿಕೆ ನೀಡಿ ಹೋಗುತ್ತಾರೆ. ರಾಜಕೀಯ ಬೆಳವಣಿಗೆಗಳ ಬಗ್ಗೆ ಅರಿವೇ ಇಲ್ಲದೆಯೇ ಪ್ರಿಯಾಂಕಾ ಅವರು ಹೇಳಿಕೆಗಳನ್ನು ನೀಡುತ್ತಾರೆ. ಇಂತಹ ಅರೆಕಾಲಿಕ ರಾಜಕಾರಣಿಗಳನ್ನು ನಿರ್ಲಕ್ಷಿಸುವುದೇ ಉತ್ತಮ ಎಂದು ತಿಳಿಸಿದ್ದಾರೆ.