ರಾಯ್ ಬರೇಲಿ: ಗುಜರಾತ್ ನ ಕತ್ತೆಗಳ ಪರ ಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಗೆ ಮನವಿ ಮಾಡಿದ್ದಾರೆ.
ಅವರು ಇಂದು ರಾಯ್ ಬರೇಲಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. ಗುಜರಾತ್ ನ ಕತ್ತೆಗಳ ಬಗ್ಗೆ ನಟ ಅಮಿತಾಬ್ ಬಚ್ಚನ್ ಪ್ರಚಾರ ಮಾಡುತ್ತಾರೆ. ಕತ್ತೆಗಳ ಪರ ಪ್ರಚಾರ ಮಾಡಲು ಹೊರಟರೆ ಏನಾಗುತ್ತದೆ ಎಂದು ಅಖಿಲೇಶ್ ಪ್ರಶ್ನಿಸಿದರು.
ಅಮಿತಾಬ್ ಬಚ್ಚನ್ ಗುಜರಾತ್ ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗಿದ್ದಾರೆ. ಜಾಹೀರಾತೊಂದರಲ್ಲಿ ಅಮಿತಾಬ್, ಭಾರತೀಯ ಕಾಡು ಕತ್ತೆ ವನ್ಯಜೀವಿ ಅಭಯಾರಣ್ಯದ ಬಗ್ಗೆ ಪ್ರಚಾರ ಮಾಡುವ ದೃಶ್ಯವಿದೆ. ಅದರಲ್ಲಿ ಭಾರತದ ಕಾಡು ಕತ್ತೆಯ ಬಗ್ಗೆ ಅವರು ವಿವರಿಸುತ್ತಾರೆ.
ಕಾಡು ಕತ್ತೆಯನ್ನು ಗುಜರಾತೀಯರು ಗುಡ್ಕರ್ ಎಂದು ಕರೆಯುತ್ತಿದ್ದು ಅದು ಕಚ್ ಪ್ರಾಂತ್ಯದ ಲಿಟ್ಲ್ ರನ್ನ್ ಭಾಗದಲ್ಲಿ ಮಾತ್ರ ಕಾಣಸಿಗುತ್ತದೆ. ಅದು ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ವರ್ಗೀಕರಿಸಲಾಗಿದೆ.
ಮೋದಿಯವರ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ವಿರುದ್ಧ ಮಾತನಾಡಿದ ಅಖಿಲೇಶ್ ಯಾದವ್, ಮಾತನಾಡುವುದನ್ನು ಬಿಟ್ಟು ಕೆಲಸ ಮಾಡಲು ಪ್ರಧಾನ ಮಂತ್ರಿಗಳಿಗೆ ಇದು ಸರಿಯಾದ ಸಮಯ ಎಂದು ಹೇಳಿದರು.