ಕಾನ್ಪುರ: ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಶಾಲಾ ಬಸ್ ವೊಂದು ಮಗುಚಿ ಬಿದ್ದಿದ್ದು, ಪರಿಣಾಮ 20 ಕ್ಕೂ ಮಕ್ಕಳಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ.
ಕಕ್ವಾನ್ ನಲ್ಲಿರುವ ಖಾಸಗಿ ಶಾಲೆಯ ಬಸ್ ವೊಂದು 40 ಮಕ್ಕಳನ್ನು ಹೊತ್ತು ಸಾಗುತ್ತಿತ್ತು. ಕಾನ್ಪುರದ ರಸೂಲ್ ಬಾದ್ ಬಳಿ ಬರುತ್ತಿದ್ದಂತೆಯೇ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಚಾಲಕ ಬಸ್ ಮೇಲಿದ್ದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಈ ವೇಳೆ ಬಸ್ ಮಗುಚಿ ಬಿದ್ದಿದೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ಬಂದು ಮಕ್ಕಳ ರಕ್ಷಣೆಗೆ ನೆರವಾಗಿದ್ದಾರೆ. ಬಸ್ ನಲ್ಲಿದ್ದ ಎಲ್ಲಾ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಘಟನೆಯಲ್ಲಿ 20 ಮಕ್ಕಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
5-14 ವರ್ಷದ ಮಕ್ಕಳು ಬಸ್ ನಲ್ಲಿದ್ದರು. ಘಟನೆಯಲ್ಲಿ ಚಾಲಕನ ಕೈ ಮೂಳೆ ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20 ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ ಎಂದು ಕಾನ್ಪುರ ಪೊಲೀಸ್ ಅಧಿಕಾರಿ ದೆಹತ್ ಪ್ರಭಾಕರ್ ಚೌಧರಿ ಹೇಳಿದ್ದಾರೆ.