

ಜಮ್ಮು: ಉಗ್ರ ಬುರ್ಹಾನ್ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಸೃಷ್ಟಿಯಾಗಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಪಾಕಿಸ್ತಾನ ಮತ್ತು ಪ್ರತ್ಯೇಕತಾವಾದಿಗಳ ವಿರುದ್ಧ ಸೋಮವಾರ ಕಿಡಿಕಾಡಿದ್ದಾರೆ.
ಕಾಶ್ಮೀರದಲ್ಲಿ ಸೃಷ್ಟಿಯಾಗಿದ್ದ ಹಿಂಸಾಚಾರ ಕುರಿತಂತೆ ಮಾತನಾಡಿರುವ ಅವರು, ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು 5 ತಿಂಗಳ ಹಿಂದೆಯೇ ಎಲ್ಲಾ ರೀತಿಯಲ್ಲಿಯೂ ತಯಾರಿ ಮಾಡಲಾಗಿತ್ತು. ನಿವೃತ್ತ ಸೈನಿಕರಿಗೆ ಮತ್ತು ನಿರಾಶ್ರಿತ ಕಾಶ್ಮೀರ ಪಂಡಿತರಿಗೆ ನಿವಾಸ ಕಲ್ಪಿಸಿ ಕೊಡುವ ಕಾಲೋನಿ ನಿರ್ಮಾಣಕ್ಕೆ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ನಿರ್ಧಾರ ಕೈಗೊಂಡಿದ್ದಕ್ಕೆ ಪ್ರತ್ಯೇಕತಾವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ಪ್ರತ್ಯೇಕತಾವಾದಿಗಳ ಪ್ರಯತ್ನ ವಿಫಲವಾಗಿತ್ತು. ಇದಾದ ನಂತರ ವಾನಿ ವಿಚಾರ ಹಿಡಿದು ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಿದ್ದರು ಎಂದು ಹೇಳಿದ್ದಾರೆ.
ಕಾಶ್ಮೀರ ಹಿಂಸಾಚಾರದಲ್ಲಿ ಸಾಕಷ್ಟು ಜನರು ಸಾವನ್ನಪ್ಪಿದ್ದರು, ಹಲವರು ಗಾಯಗೊಂಡಿದ್ದರು. ಹಿಂಸಾಚಾರವೊಂದು ಪೂರ್ವನಿಯೋಜಿತ ಪಿತೂರಿಯಾಗಿತ್ತು. ಈ ಹಿಂದೆ ಪ್ರತ್ಯೇಕತಾವಾದಿಗಳು ಕಾಶ್ಮೀರ ಪಂಡಿತರು ಹಾಗೂ ಸೈನಿಕರ ಕಾಲೋನಿ ಹಿಡಿದು ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಯತ್ನಿಸಿದ್ದರು. ಆದರೆ, ಇದರಲ್ಲಿ ವಿಫಲವಾಗಿದ್ದ ಪ್ರತ್ಯೇಕತಾವಾದಿಗಳು ನಂತರ ಬುರ್ಹಾನ್ ವಾನಿ ಪ್ರಕರಣವನ್ನು ತಂದು ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಿದ್ದರು.
ಪೂರ್ವ ತಯಾರಿ ನಡೆಸಿದ್ದ ಕಾರಣ ವಾನಿ ಹತ್ಯೆಯಾದ ಮರುದಿನವೇ ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿ ಮಾಡಿದ್ದರು. ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಲಾಗಿತ್ತು, ಅಲ್ಲದೆ, ಲೆಕ್ಕವಿಲ್ಲದಷ್ಟು ಸಿಡಿಗಳನ್ನು ವಿತರಣೆ ಮಾಡಲಾಗಿತ್ತು. ಭದ್ರತಾ ಪಡೆಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಲಿಲ್ಲ ಎಂದು ಹೇಳುವುದು ಬಹಳ ಸುಲಭ. ಆದರೆ, ದೊಡ್ಡ ಗುಂಪೊಂದು ಇದ್ದಕ್ಕಿದ್ದಂತೆ ಪೊಲೀಸ್ ಠಾಣೆ ಮೇಲೆ ಪೆಟ್ರೋಲ್ ಬಾಂಬ್ ಗಳು, ಕಲ್ಲು, ಹಾಗೂ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದಾಗ ಅವರನ್ನು ಆ ಪರಿಸ್ಥಿತಿಯಲ್ಲಿ ನಿಯಂತ್ರಿಸುವುದು ಕಷ್ಟವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಹೋಗಲು ಬಿಡಲಿಲ್ಲ. ಗರ್ಭಿಣಿಯರು ತಾವು ನಿಜಕ್ಕೂ ಗರ್ಭಿಣಿಯರೆಂಬುದನ್ನು ಸಾಬೀತು ಮಾಡಲು ತಮ್ಮ ಹೊಟ್ಟೆಯನ್ನು ತೋರಿಸುವಂತಹ ಪರಿಸ್ಥಿತಿ ಎದುರಾಗಿದ್ದು, ದಾಳಿ ನಡೆಯುವ ಭಯದಿಂದಾಗಿ ಸಾಕಷ್ಟು ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದರು. ಎಷ್ಟೋ ಜನ ಮಕ್ಕಳು ಭಯದಿಂದ ತಮ್ಮ ತಾಯಿಯರೊಂದಿಗೆ ಪರೀಕ್ಷೆ ಬರೆಯಲು ಶಾಲೆಗೆ ಬಂದಿದ್ದರು. ದ್ವೇಷವೆಂಬ ಗೋಡೆಯೊಂದಿಗೆ ಮಾತುಕತೆ ಬೇಡ. ಹೃದಯಗಳ ಜೊತೆಗೆ ಸಭೆ ನಡೆಸುವುದು ನಮಗೆ ಬೇಕಿದೆ.
ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿಯಲ್ಲಿ 370 ಜನರನ್ನು ಬಂಧನಕ್ಕೊಳಪಡಿಸಲಾಗಿದೆ. ಸರ್ಕಾರ ಈ ಕುರಿತು ಪರಿಶೀಲನೆ ನಡೆಸಬೇಕಿತ್ತು. ಆದರೆ, ಹಿಂಸಾಚಾರ ಮುಂದುವರೆಯುತ್ತಲೇ ಇದ್ದುದ್ದರಿಂದ ಇದು ಸಾಧ್ಯವಾಗಿರಲಿಲ್ಲ. ಶೀಘ್ರದಲ್ಲೇ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.