ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಭಾರತೀಯ ಸೇನಾ ಕ್ಯಾಂಪ್ ಮೇಲೆ ಹಿಮಪಾತವಾಗಿದ್ದು ಇದರಲ್ಲಿ ಓರ್ವ ಯೋಧ ಮೃತಪಟ್ಟಿದ್ದು ಹಲವು ಯೋಧರು ನಾಪತ್ತೆಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್ ಬಳಿಯಿದ್ದ ಸೇನಾ ಕ್ಯಾಂಪ್ ಮೇಲೆ ಹಿಮಪಾತವಾಗಿದೆ. ಇದರಲ್ಲಿ ಯೋಧರೊಬ್ಬರು ಮೃತಪಟ್ಟಿದ್ದು, ಆರು ಯೋಧರನ್ನು ರಕ್ಷಣಾ ತಂಡ ರಕ್ಷಿಸಿದೆ. ಆದರೆ ಇನ್ನು ನಾಲ್ವರು ಯೋಧರು ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮತ್ತೊಂದು ದುರಂತದಲ್ಲಿ ಅಂತಾರಾಷ್ಟ್ರೀಯ ಗಡಿ ಗುರೇಝ್ ಸೆಕ್ಟರ್ ಬಳಿ ಹಿಮಪಾತ ಸಂಭವಿಸಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು 55 ವರ್ಷದ ಲೋನೆ, ಪತ್ನಿ ಅಜಿಜಿ, ಪುತ್ರ ಇರ್ಫಾನ್, ಮತ್ತು ಪುತ್ರಿ ಗುನ್ಶಾನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರೀ ಪ್ರಮಾಣದಲ್ಲಿ ಹಿಮ ಬೀಳುತ್ತಿರುವುದರಿಂದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಮತ್ತು ಶ್ರೀನಗರ ವಿಮಾನ ನಿಲ್ದಾಣ ಬಂದ್ ಮಾಡಲಾಗಿದೆ.