ಕಳೆದ ಜೂನ್ 22ರಂದು ಠಾಕೂರ್ ಮತ್ತು ಇತರ ಪೊಲೀಸರು ಸೈನಾ ಪ್ರದೇಶದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಹೆಲ್ಮೆಟ್ ಧರಿಸದೆ ಬಂದ ಮೋಟಾರ್ ವಾಹನ ಸವಾರರೊಬ್ಬರಿಗೆ 200 ರುಪಾಯಿ ದಂಡ ವಿಧಿಸಿದ್ದರೆ. ಈ ವೇಳೆ ಬೈಕ್ ಸವಾರ ತಾನು ಬಿಜೆಪಿ ನಾಯಕ ಪ್ರಮೋದ್ ಕುಮಾರ್, ತನ್ನ ಪತ್ನಿ ಬುಲಂದ್ ಶಹರ್ ಜಿಲ್ಲಾ ಪಂಚಾಯತ್ ಸದಸ್ಯೆ ಎಂದು ಹೇಳಿದ್ದರೂ, ಶ್ರೇಷ್ಠಾ ಠಾಕೂರ್ ಸುಮ್ಮನೆ ಬಿಟ್ಟಿರಲಿಲ್ಲ. ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಯಾವುದೇ ಮುಲಾಜಿಲ್ಲದೇ ದಂಡ ವಿಧಿಸಿದ್ದರು. ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು ಮಾತ್ರವಲ್ಲದೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕಾಗಿ ಅಲ್ಲಿನ ಸ್ಥಳೀಯ ಬಿಜೆಪಿ ಮುಖಂಡ ಸೇರಿದಂತೆ ಐವರು ಕಾರ್ಯಕರ್ತರನ್ನು ಅಧಿಕಾರಿ ಶ್ರೇಷ್ಠಾ ಠಾಕೂರ್ ಜೈಲಿಗಟ್ಟಿದ್ದರು. ಅಲ್ಲದೆ ತಪ್ಪು ಮಾಡಿದ್ರೆ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನೂ ಕೂಡ ಬಿಡುವುದಿಲ್ಲ ಎಂದು ಗುಡುಗಿದ್ದರು.