

ನವದೆಹಲಿ: ಏಕರೂಪ ತೆರಿಗೆ ವ್ಯವಸ್ಥೆ ಜಿಎಸ್ ಟಿ ಕುರಿತಂತೆ ಗೊಂದಲಗಳು ಮುಂದುವರೆದಿರುವಂತೆಯೇ ಇದಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೈಹಾಕಿದ್ದು, ಜಿಎಸ್ ಟಿ ದರ ತೋರಿಸುವ ಜಿಎಸ್ ಟಿ ಆ್ಯಪ್ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಜಾರಿಗೊಂಡಿರುವ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್ ಟಿ) ಪರಿಕರ, ಸಾಮಗ್ರಿಗಳಲ್ಲಿ ಆದ ದರಗಳ ಬದಲಾವಣೆಯಲ್ಲಿನ ಗೊಂದಲಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಹೊಸತೊಂದು ಆ್ಯಪ್ ಬಿಡುಗಡೆ ಮಾಡಿದ್ದು, ಕೇಂದ್ರ ಹಣಕಾಸು ಇಲಾಖೆ ಸಚಿವ ಅರುಣ್ ಜೇಟ್ಲಿ ಅವರು, ದೆಹಲಿಯಲ್ಲಿ ಇದನ್ನು ಬಿಡುಗಡೆಗೊಳಿಸಿದರು.
ಯಾವ ಯಾವ ವಸ್ತುಗಳಿಗೆ ಎಷ್ಟು ತೆರಿಗೆ ವಿಧಿಸಲಾಗಿದೆ? ಯಾವುದು ಏರಿಕೆಯಾಗಿದೆ? ಯಾವ ವಸ್ತುವಿನ ಬೆಲೆ ಇಳಿಕೆಯಾಗಿದೆ ಹೀಗೆ ಜಿಎಸ್ಟಿಯ ಹಲವಾರು ವಿಷಯಗಳ ಬಗ್ಗೆ ಜನರಿಗೆ ಅರ್ಥವಾಗದೆ ಗೊಂದಲಕ್ಕೀಡಾಗಿದ್ದಾರೆ. ಈ ಎಲ್ಲಾ ಗೊಂದಲಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರ ಜಿಎಸ್ಟಿಯ ಬಗ್ಗೆ ನೂತನ ಮೊಬೈಲ್ಆ್ಯಪ್ ನ್ನು ಬಿಡುಗಡೆ ಮಾಡಿದ್ದು, ಇದರಿಂದ ಬೆರಳ ತುದಿಯಲ್ಲೇ ಜಿಎಸ್ಟಿ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಹುಡುಕಿ ಕೊಳ್ಳಬಹುದಾಗಿದೆ.
ಜಿಎಸ್ಟಿಯ ಸಮಗ್ರ ಮಾಹಿತಿಯನ್ನೊಳಗೊಂಡ 'ಜಿಎಸ್ಟಿ ಫೈಂಡರ್ಆ್ಯಪ್’ಗ್ರಾಹಕರು, ವರ್ತಕರು, ವಿದ್ಯಾರ್ಥಿಗಳು ಯಾರೇ ಬೇಕಾದರೂ ಬಳಕೆ ಮಾಡ ಬಹುದಾಗಿದ್ದು, ವಿವಿಧ ವಸ್ತುಗಳಿಗೆ ಅನ್ವಯವಾಗುವ ಜಿಎಸ್ಟಿ ದರವನ್ನು ಗ್ರಾಹಕರು ಈ ಆ್ಯಪ್ನಲ್ಲಿ ಹುಡುಕ ಬಹುದಾಗಿದೆ. ಈ ಆ್ಯಪ್ ನ ವಿಶೇಷತೆ ಎಂದರೆ ಒಂದು ಬಾರಿ ಡೌನ್ಲೋಡ್ಮಾಡಿದ ಬಳಿಕ ಈ ಆ್ಯಪ್ ಅನ್ನು ಆಫ್ಲೈನ್ಇದ್ದರೂ ಕೂಡಾ ಬಳಸಬಹುದಾಗಿದ್ದು, ಗೂಗಲ್ಪ್ಲೇ ಸ್ಟೋರ್ನಲ್ಲಿ ಈ ಆ್ಯಪ್ ಸಿಗಲಿದೆ.
GST rate finder' ಎಂಬ ಹೆಸರನ್ನೇ ಹೊಂದಿರುವ ಈ ಅಪ್ಲಿಕೇಶನ್ ನಿಂದಾಗಿ ಜನರಿಗೆ ತಾವುಕೊಳ್ಳಲಿರುವ ಸರಕು ಅಥವಾ ಸಾಮಗ್ರಿಗಳ ಬೆಲೆಯ ಹಿಂದಿನ ಹಾಗೂ ಈಗಿರುವ ಬೆಲೆಯ ವ್ಯತ್ಯಾಸಗಳನ್ನು ತಿಳಿಯಲು ಅನುಕೂಲ ಕಲ್ಪಿಸುತ್ತದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇರುವ ಮೊಬೈಲ್ ಗಳಿಗೆ ಈ ಆ್ಯಪ್ ದೊರೆಯುತ್ತಿದ್ದು, ಶೀಘ್ರದಲ್ಲೇ ಐ-ಒಎಸ್ ಗೂ ಈ ಆ್ಯಪ್ ಲಭ್ಯವಾಗಲಿದೆ ಎಂದು ಹೇಳಲಾಗಿದೆ.