ಪಾಟ್ನಾ: ಬಿಹಾರದ ಪ್ರಮುಖ ರಾಜಕೀಯ ಪಕ್ಷಗಳಾದ ಜೆಡಿಯು ಮತ್ತು ಆರ್‌ಜೆಡಿ ಮಹಾಮೈತ್ರಿಯಲ್ಲಿ ಬಿರುಕು ಮೂಡಿದ್ದು ಇನ್ನು ಹೆಚ್ಚು ದಿನ ಮಹಾಮೈತ್ರಿ ಉಳಿಯುವ ಸಾಧ್ಯತೆ ಇಲ್ಲವಾಗಿದೆ.
ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ರಾಜಿನಾಮೆಗೆ ಜೆಡಿಯು ಒತ್ತಾಯಿಸುತ್ತಿದ್ದು ಈ ಮೂಲಕ ಮಹಾಮೈತ್ರಿ ಕಡಿದುಕೊಂಡು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಜೆಡಿಯು ಮುಖ್ಯಸ್ಥ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ದಾಖಲಿಸಿರುವ ಎಫ್ಐಆರ್ ವಿಚಾರದಲ್ಲಿ ಸೂಕ್ತ ವಿವರಣೆ ನೀಡುವಲ್ಲಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾವದ್ ವಿಫಲರಾಗಿದ್ದು ಈ ಪ್ರಕರಣದಲ್ಲಿ ನಿತೀಶ್ ಕುಮಾರ್ ಅವರು ತೇಜಸ್ವಿ ವಿರುದ್ಧ ನಿಲುವು ಸಡಿಲಗೊಳಿಸುವ ಲಕ್ಷಣಗಳು ಕಾಣುತ್ತಿಲ್ಲ. ಇದರ ಜತೆಗೆ ತೇಜಸ್ವಿ ರಾಜಿನಾಮೆಗೆ ಜೆಡಿಯು ತೀವ್ರ ಒತ್ತಡ ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.
ಮಹಾಮೈತ್ರಿಯಲ್ಲಿ ಒಡೆಯುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪಾಟ್ನಾದ ತಮ್ಮ ನಿವಾಸದಲ್ಲಿ ಆರ್‌ಜೆಡಿ ಶಾಸಕರ ತುರ್ತುಸಭೆ ಕರೆದಿದ್ದಾರೆ.