

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ತಮ್ಮ ಸರ್ಕಾರದ ಸಚಿವ ಸಂಪುಟವನ್ನು ವಿಸ್ತರಣೆ ಮಾಡುವ ಸಾಧ್ಯತೆ ಇದ್ದು, ಈ ಬಾರಿ ತಮಿಳುನಾಡಿನ ಎಐಎಡಿಎಂಕೆ ಹಾಗೂ ಬಿಹಾರದ ಜೆಡಿಯು ಪಕ್ಷಗಳ ಮುಖಂಡರನ್ನು ಕೇಂದ್ರ ಸಚಿವರಾಗಿ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಆಗಸ್ಟ್ ತಿಂಗಳ ಮೊದಲ ವಾರದಲ್ಲೇ ಸಚಿವ ಸುಂಪುಟ ವಿಸ್ತರಣೆ ಸಾಧ್ಯತೆ ಇದ್ದು, ಈ ಬಾರಿ ಎನ್‍ಡಿಎ ಮೈತ್ರಿ ಕೂಟಕ್ಕೆ ಜೆಡಿಯು ಮತ್ತು ಎಐಎಡಿಎಂಕೆ ಸೇರ್ಪಡೆಯಾಗಲಿವೆ. ಆಗಸ್ಟ್ 8ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಅಥವಾ ರಾಜ್ಯಸಭೆ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಕೇಂದ್ರ ಸಚಿವರಾಗಿದ್ದ ವೆಂಕಯ್ಯ ನಾಯ್ಡು ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿದ್ದು, ಇದರಿಂದ ಅವರ ಸ್ಥಾನ ತೆರವಾಗಿದೆ. ಇದಕ್ಕೂ ಮೊದಲು ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರೂ ಕೂಡ ಗೋವಾ ವಿಧಾನಸಭೆ ಚುನಾವಣೆ ಬಳಿಕ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಗೋವಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂತೆಯೇ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಸಂಪುಟ ವಿಸ್ತರಣೆ ಅಗತ್ಯ ಎಂದು ಹೇಳಲಾಗುತ್ತಿದೆ.
ಇದಲ್ಲದೆ ತಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಕೆಲವು ಸಚಿವ ಖಾತೆಗಳನ್ನು ಪ್ರಧಾನಿ ಮೋದಿ ಅದಲು ಬದಲು ಮಾಡಲಿದ್ದು, ಕಳಪೆ ಸಾಧನೆ ಮಾಡಿರುವ ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜನೆ ಮಾಡುವ ಸಂಭವವಿದೆ. ಪ್ರಸ್ತುತ ರಕ್ಷಣಾ ಖಾತೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದ್ದು, ಪ್ರಸ್ತುತ ಗಡಿಯಲ್ಲಿನ ಪರಿಸ್ಥಿತಿ ಹಾಗೂ ನೆರೆ ರಾಷ್ಟ್ರಗಳೊಂದಿಗಿನ ತಗಾದೆಗಳಿಂದಾಗಿ ರಕ್ಷಣಾ ಇಲಾಖೆಯ ಪರಿಪೂರ್ಣ ಜವಾಬ್ದಾರಿ ಹೊರುವ ಸಮರ್ಥರು ಬೇಕಾಗಿದ್ದಾರೆ. ಒಂದೆಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಪಾಕ್ ಉಗ್ರರ ಉಪಟಳ, ಗಡಿಯಲ್ಲಿ ಸೇನಾ ಶಿಬಿರಗಳ ಮೇಲೆ ನಡೆಯುತ್ತಿರುವ ದಾಳಿ, ಚೀನಾ-ಭಾರತ ನಡುವೆ ಮಿಜೋರಾಮ್‍ನಲ್ಲಿ ಉಂಟಾಗಿರುವ ಗಡಿ ಉದ್ವಿಗ್ನತೆಯಿಂದಾಗಿ ರಕ್ಷಣಾ ಖಾತೆಗೆ ಪೂರ್ಣಾವಧಿ ಸಚಿವರು ಬೇಕೆಂಬ ಕೂಗು ಕೇಳಿ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಮೋದಿ ಕೂಡ ಸಂಪುಟ ವಿಸ್ತರಣೆಗೆ ಒಲವು ತೋರಿದ್ದು, ಅತ್ಯಂತ ಮಹತ್ವದ ಜವಾಬ್ದಾರಿಯಾಗಿರುವ ರಕ್ಷಣಾ ಖಾತೆಯನ್ನು ಯಾರ ಹೆಗಲಿಗೆ ನೀಡಬೇಕಂಬುದರ ಬಗ್ಗೆ ಹಿರಿಯ ಸಚಿವರಿಂದ ಸಲಹೆ ಪಡೆದಿದ್ದಾರೆ.
4 ದಿನಗಳ ಹಿಂದಷ್ಟೇ ಎನ್‍ಡಿಎ ಮೈತ್ರಿಕೂಟಕ್ಕೆ ಜೆಡಿಯು ಸೇರ್ಪಡೆಯಾಗಿದ್ದು, ಮೋದಿ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. ಹಾಗೊಂದು ವೇಳೆ ನಡದದ್ದೇ ಆದರೆ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಮುಖಂಡ ಶರದ್ ಯಾದವ್ ಗೆ ರಕ್ಷಣಾ ಖಾತೆ ಸಿಗುವ ಸಂಭವವನ್ನು ತಳ್ಳಿ ಹಾಕುವಂತಿಲ್ಲ. ಆದರೆ, ಎನ್‍ಡಿಎ ಮೈತ್ರಿ ಕೂಟಕ್ಕೆ ಸೇರ್ಪಡೆಗೊಂಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿರ್ಧಾರಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿರುವುದರಿಂದ ಈ ಸಾಧ್ಯತೆ ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು 2019ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ 50ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿ ಹೋಂದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಅವರು, ತಮಿಳುನಾಡಿನತ್ತ ಗಮನ ಹರಿಸಿದ್ದಾರೆ. ಈ ಹಿಂದೆ ವಾಜಪೇಯಿ ಸಂಪುಟದಲ್ಲಿ ಎನ್‍ಡಿಎ ಮೈತ್ರಿ ಭಾಗವಾಗಿದ್ದ ಎಐಎಡಿಎಂಕೆ ಹಲವು ಕಾರಣಗಳಿಂದ ದೂರ ಸರಿದಿತ್ತು. ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಕಾವೇರಿ ನದಿ ನೀರು ಹಂಚಿಕೆ ಸೇರಿದಂತೆ ಹಲವು ಕಾರಣಗಳಿಂದ ಕೇಂದ್ರದ ಜತೆ ಮುನಿಸಿಕೊಂಡು ಹೊರ ಬಂದಿದ್ದರು. ಇದೀಗ ಆಡಳಿತಾರೂಢ ಎಐಎಡಿಎಂಕೆಯಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಮಾಜಿ ಸಿಎಂ ಪನ್ವೀರ್ ಸೆಲ್ವಂ ನಡುವೆ ಬಣಗಳು ಉಂಟಾಗಿ ಪಕ್ಷ ಇಬ್ಬಾಗದತ್ತ ಸರಿದಿದೆ. ಈ ಅವಕಾಶವನ್ನೇ ಬಳಸಿಕೊಂಡಿರುವ ಅಮಿತ್ ಶಾ ಎಐಎಡಿಎಂಕೆಯನ್ನು ಎನ್ ಡಿಎ ತೆಕ್ಕೆಗೆ ಸೆಳೆಯಲು ಮುಂದಾಗಿದ್ದಾಗಿದ್ದಾರೆ. ಇದಕ್ಕೆ ಪಳನಿಸ್ವಾಮಿ ಕೂಡ ಅಸ್ತು ಎಂದಿದ್ದು, ಆಗಸ್ಟ್ ಮೊದಲ ವಾರದ ನಂತರ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿದೆ.