ನವದೆಹಲಿ: ಎನ್ ಡಿಟಿವಿ ಸಹ ಸಂಸ್ಥಾಪಕ ಪ್ರಣಾಯ್ ರಾಯ್ ಅವರ ನಿವಾಸದ ಮೇಲೆ ನಡೆಸಿರುವ ದಾಳಿ ಮತ್ತು ಕೇಸು ದಾಖಲಿಗೆ ಸಂಬಂಧಪಟ್ಟಂತೆ ಸ್ಪಷ್ಟೀಕರಣ ನೀಡಿರುವ ಸಿಬಿಐ, ಸಂಸ್ಥೆ ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸುತ್ತಿದ್ದು, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಭಾರತೀಯ ಸಂಪಾದಕರ ಗಿಲ್ಡ್ ಸೇರಿದಂತೆ ಅನೇಕ ಮಾಧ್ಯಮ ಸಂಸ್ಥೆಗಳು ಸಿಬಿಐ ನಡೆಸಿರುವ ದಾಳಿ ಬಗ್ಗೆ ಟೀಕೆ, ಅನುಕಂಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆ ಈ ಹೇಳಿಕೆ ನೀಡಿದೆ.
ಮಾಧ್ಯಮ ಕಚೇರಿಗಳಿಗೆ ಪೊಲೀಸ್ ಮತ್ತು ಇತರ ತನಿಖಾ ಸಂಸ್ಥೆಗಳ ಪ್ರವೇಶ ಗಂಭೀರವಾದ ವಿಷಯ ಎಂದು ನಿನ್ನೆ ನಡೆದ ದಾಳಿ ನಂತರ ಸಂಪಾದಕರ ಗಿಲ್ಡ್ ಖಂಡಿಸಿತ್ತು.
ಈ ಬಗ್ಗೆ ಇಂದು ವಿಸ್ತೃತವಾದ ಹೇಳಿಕೆ ಬಿಡುಗಡೆ ಮಾಡಿರುವ ತನಿಖಾ ಸಂಸ್ಥೆ, ಎನ್ ಡಿಟಿವಿಯ ನೋಂದಣಿ ಕಚೇರಿ, ಮಾಧ್ಯಮ ಸ್ಟುಡಿಯೊ, ಸುದ್ದಿ ಕೋಣೆ ಅಥವಾ ಕಚೇರಿ ಆವರಣದಲ್ಲಿ ಮಾಧ್ಯಮ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಕೋಣೆಗಳಲ್ಲಿ ಯಾವುದೇ ಶೋಧ ಕಾರ್ಯ ನಡೆಸಲಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸಿಬಿಐ ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸುತ್ತದೆ. ಸುದ್ದಿ ಮನೆಯ ಮುಕ್ತ ಕಾರ್ಯನಿರ್ವಹಣೆಗೆ ಬದ್ಧವಾಗಿದೆ. ಸಿಬಿಐಯ ತನಿಖೆ ಸಾಲ ಮರುಪಾವತಿಯ ಕೊರತೆಗೆ ಸಂಬಂಧಪಟ್ಟದ್ದಲ್ಲ ಎಂದು ಹೇಳಿದೆ.
ಪ್ರಣಾಯ್ ರಾಯ್, ರಾಧಿಕಾ ರಾಯ್ ಮತ್ತು ಆರ್ ಆರ್ ಪಿಆರ್ ಸಂಸ್ಥೆ ಅಕ್ರಮವಾಗಿ 48 ಕೋಟಿ ರೂಪಾಯಿ ಹಣವನ್ನು ಸಂಪಾದಿಸಿದ್ದರ ಬಗ್ಗೆ ತನಿಖೆ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.