ನವದೆಹಲಿ: 1 ಸಾವಿರ ಕೋಟಿ ರುಪಾಯಿ ಅಕ್ರಮ ಭೂ ಒಪ್ಪಂದಕ್ಕೆ ಸಂಬಂಧಿಸಿದಂತೆ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರ್ತಿ ಅವರಿಗೆ ಆದಾಯ ತೆರಿಗೆ ಇಲಾಖೆ ಮಂಗಳವಾರ ಮತ್ತೆ ಹೊಸದಾಗಿ ಸಮನ್ಸ್ ಜಾರಿ ಮಾಡಿದೆ.
ಭೂ ಹಗಣ ಸಂಬಂಧ ಮಿಸಾ ಭಾರ್ತಿ ಅವರು ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ವಿಚಾರಣೆಗೆ ಹಾಜರಾಗದ ಹಿನ್ನೆಲಯಲ್ಲಿ ಜೂನ್ 12ರಂದು ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಮತ್ತೆ ಸಮನ್ಸ್ ಜಾರಿ ಮಾಡಲಾಗಿದೆ.
ರಾಜ್ಯ ಸಭಾ ಸದಸ್ಯೆಯಾಗಿರುವ ಮಿಸಾ ಭಾರ್ತಿ ಅವರ ಪರವಾಗಿ ಇಂದು ಅವರ ವಕೀಲರು ವಿಚಾರಣೆಗೆ ಹಾಜರಾಗಿದ್ದರು. ಆದರೆ ಖುದ್ದು ಮಿಸಾ ಭಾರ್ತಿಗೆ ವಿಚಾರಣೆಗೆ ಹಾಜರಾಗುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದೇ ಪ್ರಕರಣ ಸಂಬಂಧ ಮಿಸಾ ಭಾರ್ತಿ ಅವರ ಪತಿ ಶೈಲೆಶ್ ಕುಮಾರ್ ಅವರಿಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.