ಲಖನೌ: ಎನ್ ಕೌಂಟರ್ ಗೆ ಬಲಿಯಾದ ಶಂಕಿತ ಉಗ್ರ ಸೈಫುಲ್ಲಾ ಒಳಗೊಂಡ ಉಗ್ರ ಸಂಘಟನೆಯ ಪ್ರಮುಖ ರೂವಾರಿ, ವಾಯುಪಡೆಯ ಮಾಜಿ ನೌಕರನನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತ ಶಂಕಿತ ಉಗ್ರ ಮೊಹದ್ ಗೌಸ್ ಖಾನ್ ಎಂದು ಗುರುತಿಸಲಾಗಿದ್ದು, ಉಗ್ರ ನಿಗ್ರಹ ಪಡೆ ಇಂದು ಕಾನ್ಪುರದಲ್ಲಿ ಬಂಧಿಸಿದೆ. ಅಲ್ಲದೆ ವಿಚಾರಣೆ ವೇಳೆ ಗೌಸ್ ಹಲವು ಮಹತ್ವದ ಮಾಹಿತಿ ನೀಡಿರುವುದಾಗಿ ಉತ್ತರ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ದಲ್ಜಿತ್ ಚೌಧರಿ ಅವರು ಹೇಳಿದ್ದಾರೆ.
ಎಟಿಎಸ್ ಅಧಿಕಾರಿಗಳು ಅಜರ್ ಎಂಬ ಮತ್ತೊಬ್ಬ ಶಂಕಿತ ಉಗ್ರನನ್ನು ಸಹ ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಜರ್ ಎರಡನೇ ಪ್ರಮುಖ ಆರೋಪಿಯಾಗಿದ್ದು, ಉಗ್ರ ಸಂಘಟನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಎಂದು ಚೌಧರಿ ಹೇಳಿದ್ದಾರೆ. ಆದರೆ ಆತನನ್ನು ಎಲ್ಲಿ ಬಂಧಿಸಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.