

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ವಿವಿಧ ಮುಖಂಡರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಸೇರಿದಂತೆ 13 ಮುಖಂಡರ ವಿರುದ್ಧದ ಆರೋಪಗಳನ್ನು ಕೈ ಬಿಟ್ಟ ವಿಚರಣಾಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆ ಮುಂದೂಡಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್ ಎಸ್ ನಾರಿಮನ್ ನೇತೃತ್ವದ ಪೀಠ ಇಂದು ಪ್ರಕರಣದ ವಿಚಾರಣೆ ನಡೆಸಿ 13 ಮಂದಿ ಮುಖಂಡರ ವಿರುದ್ಧ ಆರೋಪಗಳನ್ನು ಕೈಬಿಟ್ಟ ವಿಚಾರ ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಪ್ರಕರಣದ ವಿಚಾರಣೆಯನ್ನು ನಾಳೆ ನಡೆಸುವುದಾಗಿ ಪೀಠ ಹೇಳಿದೆ.
ನಿನ್ನೆಯಷ್ಟೇ ಇದೇ ಸುಪ್ರೀಂ ಕೋರ್ಟ್ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ನೇತೃತ್ವದ ಪೀಠ, ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ಹೇಳಿತ್ತು. ಇದಾದ ಬೆನ್ನಲ್ಲೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಇನ್ನು ಈ ಹಿಂದೆ ಅಂದರೆ ಮಾರ್ಚ್ 6ರಂದು ನಡೆದಿದ್ದ ವಿಚಾರಣೆ ವೇಳೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಸೇರಿದಂತೆ ಬಿಜೆಪಿ ಪ್ರಮುಖ ಮುಖಂಡರ ವಿರುದ್ಧದ ಆರೋಪಗಳನ್ನು ಕೈ ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ದೇಶಾದ್ಯಂತ ತೀವ್ರ ಹಿಂಸಾಚಾರ ಮತ್ತು ಕೋಮುಗಲಭೆಗೆ ಕಾರಣವಾಗಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಆರ್ ಎಸ್ ಎಸ್ ಮುಖಂಡ ಮುರಳಿ ಮನೋಹರ್ ಜೋಷಿ, ಕೇಂದ್ರ ಸಚಿವೆ ಉಮಾಭಾರತಿ ಅವರ ವಿರುದ್ಧದ ಷಡ್ಯಂತ್ರ ಆರೋಪವನ್ನು ತಾಂತ್ರಿಕ ಕಾರಣಗಳಿಂದಾಗಿ ಕೈಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅಲ್ಲದೆ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವುದಕ್ಕೂ ನ್ಯಾಯಾಲಯ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು.
ಇದೇ ಪ್ರಕರಣ ಸಂಬಂಧ ಎಲ್ ಕೆ ಅಡ್ವಾಣಿ ಸೇರಿದಂತೆ ಇತರೆ 12ಕ್ಕೂ ಹೆಚ್ಚು ಮುಖಂಡರ ವಿರುದ್ಧ ಸಿಬಿಐ ದಾಖಲಿಸಿದ್ದ ಷಡ್ಯಂತ್ರ ಆರೋಪವನ್ನು ಅಲಹಾಬಾದ್ ನ್ಯಾಯಾಲಯ ಕೈಬಿಟ್ಟಿತ್ತು. ಹೀಗಾಗಿ ಅಲಹಾಬಾದ್ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಪ್ರಶ್ನಿಸಿದ್ದು, ಈ ಹಿಂದೆ ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ, "ತಾಂತ್ರಿಕವಾಗಿ ಪ್ರಕರಣವನ್ನು ಪರಿಶೀಲಿಸಿದರೆ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ, ವಿನಯ್ ಕಟಿಯಾರ್ ಮತ್ತು ಕಲ್ಯಾಣ್ ಸಿಂಗ್ ಸೇರಿದಂತೆ ಹತ್ತಕ್ಕೂ ಅಧಿಕ ಮುಖಂಡರ ವಿರುದ್ಧದ ಆರೋಪಗಳನ್ನು ಕೈ ಬಿಡಲು ಸಾಧ್ಯವಿಲ್ಲ. ಹೀಗಾಗಿ ವಿಚಾರಣಾಧೀನ ನ್ಯಾಯಾಲಯವನ್ನು ಜಂಟಿ ವಿಚಾರಣೆ ನಡೆಸುವಂತೆ ಕೇಳಲಾಗುತ್ತದೆ ಎಂದು ಹೇಳಿತ್ತು. ಅಂತೆಯೇ ಮುಂದಿನ ವಿಚಾರಣೆಯನ್ನು ಮಾರ್ಚ್ 22 ಕ್ಕೆ ಅಂದರೆ ಇಂದಿಗೆ ಮುಂದೂಡುವುದಾಗಿಯೂ ಮತ್ತು ಎಲ್ ಕೆ ಅಡ್ವಾಣಿ ಸೇರಿದಂತೆ ಇತರೆ 13 ಮಂದಿ ನಾಯಕರ ವಿರುದ್ಧದ ಆರೋಪಗಳನ್ನು ಕೈಬಿಡಬೇಕೇ ಅಥವಾ ಇಲ್ಲವೇ ಎಂಬುದರ ಕುರಿತು ನಿರ್ಣಯ ಕೈಗೊಳ್ಳುವುದಾಗಿಯೂ ಕೋರ್ಟ್ ಹೇಳಿತ್ತು.