ತ್ರಿಪುರ: ತೃಣಮೂಲ ಕಾಂಗ್ರೆಸ್(ಟಿಎಂಸಿ)ನ ಒಟ್ಟು 65 ರಾಜ್ಯ ಸಮಿತಿ ಸದ್ಯಸರ ಪೈಕಿ 16 ರಾಜ್ಯ ಸಮಿತಿ ಸದಸ್ಯರು ಸೇರಿದಂತೆ 400 ಸದಸ್ಯರು ಗುರುವಾರ ತ್ರಿಪುರದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ ನ ತ್ರಿಪುರ ಘಟಕದ ಮಾಜಿ ಅಧ್ಯಕ್ಷ ರತನ್ ಚಕ್ರಬೊರ್ತಿ ಅವರು ಸೇರಿದಂತೆ 400 ಟಿಎಂಸಿ ಕಾರ್ಯಕರ್ತರು ಇಂದು ತ್ರಿಪುರ ಬಿಜೆಪಿ ಘಟಕದ ಅಧ್ಯಕ್ಷ ಬಿಪ್ಲಬ್ ದೇಬ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ರಾಜೆನ್ ಗೋಯಿನ್ ಅವರ ನೇತೃತ್ವದಲ್ಲಿ ಕೇಸರಿ ಪಡೆ ಸೇರಿದರು.
ದೇಶದಲ್ಲಿ ಅಭಿವೃದ್ಧಿಗೆ ಹೆಚ್ಚು ಮಹತ್ವ ಕೊಡುತ್ತಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿಯಾಗಿದ್ದು, ಮುಂಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ರತನ್ ಚಕ್ರಬೊರ್ತಿ ಅವರು ಹೇಳಿದ್ದಾರೆ.
ಬಿಜೆಪಿ ಸೇರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಚಕ್ರಬೊರ್ತಿ ಅವರು, ನಾನು ಯಾವುದೇ ಷರತ್ತಿಲ್ಲದೆ ಬಿಜೆಪಿ ಸೇರಿದ್ದು, ಮತ್ತಷ್ಟು ಟಿಎಂಕೆ ಕಾರ್ಯಕರ್ತರನ್ನು ಬಿಜೆಪಿಗೆ ಕರೆತರುವ ಮೂಲಕ ಪಕ್ಷ ಸಂಘಟಿಸುವುದಾಗಿ ತಿಳಿಸಿದ್ದಾರೆ.