ಚಿಕ್ಕಪ್ಪನಿಂದಲೇ ಅತ್ಯಾಚಾರ, ಬೆದರಿಕೆ: ಹೆದರಿ ಆತ್ಮಹತ್ಯೆಗೆ ಶರಣಾದ ಬಾಲಕಿ

ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೊಳಗಾಗಿ ಆತನ ಬೆದರಿಕೆಗೆ ಹೆದರಿದ ಅಪ್ರಾಪ್ತಾ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಚೆನ್ನೈ: ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೊಳಗಾಗಿ ಆತನ ಬೆದರಿಕೆಗೆ ಹೆದರಿದ ಅಪ್ರಾಪ್ತಾ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 
ಆರೋಪಿ ಚೆನ್ನೈನಲ್ಲಿ ಖಾಸಗಿ ಶಾಲೆಯೊಂದನ್ನು ನಡೆಸುತ್ತಿದ್ದು, ಆತ ಹಾಗೂ ಆತನ ಕುಟುಂಬಸ್ಥರು ತಲೆ ಮರೆಸಿಕೊಂಡಿದ್ದಾರೆ.
ಅತ್ಯಾಚಾರ ವಿಚಾರ ತಿಳಿದಿದ್ದರೂ, ಬಾಲಕಿಯ ಮನೆಯವರು ಕುಟುಂಬ ಮರ್ಯಾದೆಗಾಗಿ ಮೌನವಹಿಸಿದ್ದಾರೆ. ಕುಟುಂಬದೊಳಗೆ ನಡೆದ ಈ ದೌರ್ಜನ್ಯ ಹಾಗೂ ಆಮಾನವೀಯ ಕೃತ್ಯಕ್ಕೆ ನೊಂದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 
ಆತ್ಮಹತ್ಯೆಗೂ ಮುನ್ನ ಬಾಲಕಿ ಡೆತ್ ನೋಟ್ ಬರೆದಿದ್ದಾಳೆ. 2016 ಸೆಪ್ಟೆಂಬರ್ 5 ರಂದು ಬಾಲಕಿ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದಾಳೆ. ಈ ವೇಳೆ ಮನೆಯಲ್ಲಿ ಆಕೆಯ ಚಿಕ್ಕಪ್ಪ ಒಬ್ಬನೇ ಇರುವುದು ಕಂಡು ಬಂದಿದೆ. ಬಾಲಕಿಯನ್ನು ಕೂರಿಸಿರುವ ಆತ ನಿದ್ರೆ ಮಾತ್ರೆಯನ್ನು ಹಾಕಿ ಜ್ಯೂಸ್ ನೀಡಿದ್ದಾನೆ. ನಂತರ ಬಾಲಕಿ ಪ್ರಜ್ಞೆ ಕಳೆದುಕೊಂಡ ವೇಳೆ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ, ವಿಡಿಯೋವನ್ನು ಮಾಡಿಕೊಂಡಿರುವ ಆರೋಪಿ ವಿಚಾರವನ್ನು ಯಾರಿಗಾದರೂ ಬಾಯಿ ಬಿಟ್ಟರೆ ವಿಡಿಯೋವನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆಂದು ಬಾಲಕಿ ಪತ್ರದಲ್ಲಿ ಹೇಳಿಕೊಂಡಿದ್ದಾಳೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಘಟನೆ ನಡೆದು 5 ತಿಂಗಳಾದರೂ ಬಾಲಕಿ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಸಾಕಷ್ಟು ಮಾನಸಿಕ ಹಿಂಸೆ ಬಳಿಕ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಈ ವೇಳೆ ಕುಟುಂಬಸ್ಥರು ಆಕೆಯನ್ನು ರಕ್ಷಿಸಿದ್ದಾರೆ. ನಂತರ ಕುಟುಂಬಸ್ಥರು ಬಾಲಕಿಯನ್ನು ವಿಚಾರಿಸಿದ್ದಾರೆ. ಈ ವೇಳೆ ಆಕೆಯ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ ಆರೋಪಿಗೆ ಎಚ್ಚರ ನೀಡಿದ ಕುಟುಂಬಸ್ಥರು, ಕುಟುಂಬದ ಮರ್ಯಾದೆಗಾಗಿ ವಿಚಾರವನ್ನು ಯಾರಿಗೂ ಹೇಳದೆ ಮೌನದಿಂದ ಇರುವಂತೆ ತಿಳಿಸಿದ್ದಾರೆ. 
ಇಷ್ಟೆಲ್ಲಾ ಆದರೂ ಆರೋಪಿ ಮತ್ತೆ ಬಾಲಕಿಗೆ ಬೆದರಿಕೆ ಹಾಕಲು ಆರಂಭಿಸಿದ್ದಾನೆ. ತನ್ನ ಮಾತನ್ನು ಕೇಳದಿದ್ದರೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಇದರ ಜೊತೆಗೆ ಆರೋಪಿ ಪತ್ನಿ ಕೂಡ ವಿಚಾರವನ್ನು ಎಲ್ಲಿಯೂ ಬಾಯ್ಬಿಡದಂತೆ ಬೆದರಿಕೆ ಹಾಕಿದ್ದಾಳೆ. ಆತ್ಮಹತ್ಯೆಗೂ ಎರಡು ದಿನಗಳ ಹಿಂದೆ ಬಾಲಕಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದಿವೆ. ಇದಕ್ಕೆ ತೀವ್ರವಾಗಿ ನೊಂದ ಬಾಲಕಿ ಕಳೆದ ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬೆಂಕಿ ಹಚ್ಚಿಕೊಂಡಿದ್ದಾಳೆ. 
ಬಾಲಕಿಯ ಚೀರಾಟವನ್ನು ಕೇಳಿದ ಸ್ಥಳೀಯರು ಕಿಟಕಿಯಲ್ಲಿ ನೋಡಿದ್ದಾರೆ. ಈ ವೇಳೆ ಬಾಲಕಿ ಬೆಂಕಿ ಹಚ್ಚಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಬಾಗಿಲನ್ನು ಒಡೆದು ಬಾಲಕಿಯನ್ನು ಕಿಲ್ಪೌಕ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಬಾಲಕಿ ಸಾವನ್ನಪ್ಪಿದ್ದಾಳೆಂದು ವೈದ್ಯರು ತಿಳಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ. 
ಪ್ರಸ್ತುತ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com