ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ ಸರ್ಕಾರ ಇಂದು ಸಚಿವ ಸಂಪುಟ ಪುನಾರಚನೆ ಮಾಡಿದ್ದು, 10 ನೂತನ ಸಚಿವರನ್ನು ಸೇರ್ಪಡೆಗೊಳಿಸಿದೆ.
ಭುವನೇಶ್ವರದ ರಾಜಭವನದಲ್ಲಿ ಇಂದು ಬೆಳಗ್ಗೆ ರಾಜ್ಯಪಾಲ ಡಾ. ಎಸ್.ಸಿ. ಜಮೀರ್ 10 ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಡೆಪ್ಯುಟಿ ಸ್ಪೀಕರ್ ಮತ್ತು ಬಿಜೆಡಿಯ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಕರಂಜಿಯಾ ಕ್ಷೇತ್ರ ಶಾಸಕ ಬಿಜಯ್ ನಾಯಕ್ ಹೆಸರನ್ನು ಕೊನೆಯಕ್ಷಣದಲ್ಲಿ ಕೈಬಿಡಲಾಗಿದೆ. ನೂತನ ಸಂಪುಟದಲ್ಲಿ 13 ಜಿಲ್ಲೆಯ ಪ್ರಾತಿನಿಧ್ಯ ಇಲ್ಲವಾಗಿದೆ. 17 ವರ್ಷಗಳಬಿಜೆಡಿ ಆಳ್ವಿಕೆಯಲ್ಲಿ ಇದು ಅತ್ಯಂತ ದೊಡ್ಡ ಪುನರ್ ರಚನೆ ಎನ್ನಲಾಗಿದೆ.
ಒಟ್ಟು 20 ಸಚಿವರಲ್ಲಿ 10 ಸಚಿವರು ಇತ್ತೀಚೆಗೆ ರಾಜೀನಾಮೆಯನ್ನು ನೀಡಿದ್ದ ಹಿನ್ನೆಲೆಯಲ್ಲಿ ಸಂಪುಟಪುನಾರಚನೆಯಾಗಿದೆ.