

ನವದೆಹಲಿ: ಅರವಿಂದ್ ಕೇಜ್ರಿವಾಲ್ ವಿರುದ್ಧ ಭ್ರಷ್ಚಾಚಾರದ ಆರೋಪ ಮಾಡಿ ಸತ್ಯಾಗ್ರಹ ನಡೆಸತ್ತಿರುವ ಆಮ್ ಆದ್ಮಿ ಪಕ್ಷದ ಉಚ್ಛಾಟಿತ ಮುಖಂಡ ಕಪಿಲ್ ಮಿಶ್ರಾ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ದೆಹಲಿಯ ತಮ್ಮ ನಿವಾಸದಲ್ಲಿ ಕಪಿಲ್ ಮಿಶ್ರಾ ಪ್ರತಿಭಟನೆ ನಡೆಸುತ್ತಿದ್ದು, ಆಮ್ ಆದ್ಮಿ ಪಕ್ಷದ ಐದು ಪ್ರಮುಖ ಮುಖಂಡರ ವಿದೇಶ ಪ್ರವಾಸ ಕುರಿತು ಮಾಹಿತಿ ನೀಡುವಂತೆ ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಿನ್ನೆ ಸಂಜೆ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕಾಗಮಿಸಿದ ವ್ಯಕ್ತಿಯೋರ್ವ ಏಕಾಏಕಿ ಕಪಿಲ್ ಮಿಶ್ರಾ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡಿದಾತನನ್ನು ಅಂಕಿತ್ ಭಾರದ್ವಾಜ್ ಎಂದು ಗುರುತಿಸಲಾಗಿದ್ದು, ಬೆಂಬಲಿಗರು ಹಾಗೂ ಕಾರ್ಯಕರ್ತರ ನೆರವಿನಿಂದ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಬಳಿಕ ಜಾಮೀನಿನ ಮೇಲೆ ಅತನನ್ನು ಬಿಡುಗಡೆ ಮಾಡಲಾಗಿದೆ.
ಇನ್ನು ತಮ್ಮ ಮೇಲಿನ ದಾಳಿಯನ್ನು ಖಂಡಿಸಿರುವ ಕಪಿಲ್ ಮಿಶ್ರಾ, ಇದು ಆಪ್ ಪಕ್ಷ ನಡೆಸಿರುವ ದಾಳಿಯಾಗಿದ್ದು, ಆತ ಆಪ್ ಪಕ್ಷದ ಕಾರ್ಯಕರ್ತ ಎಂದು ದೂರಿದ್ದಾರೆ. ಇನ್ನು ಕಪಿಲ್ ಮಿಶ್ರಾ ಆರೋಪವನ್ನು ತಳ್ಳಿಹಾಕಿರುವ ಆಪ್, ಆತ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನಾಗಿದ್ದು, ತಮ್ಮ ಪಕ್ಷ ಇಂತಹ ಕೃತ್ಯಗಳನ್ನು ಬೆಂಬಲಿಸುವುದಿಲ್ಲ ಎಂದು ಆಪ್ ಮುಖಂಡ ಸಂಜಯ್ ಸಿಂಗ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ವಿರುದ್ಧ ಸಮರ ಸಾರಿರುವ ದೆಹಲಿಯ ಪದಚ್ಯುತ ಸಚಿವ ಕಪಿಲ್ ಮಿಶ್ರಾ ಅವರು ಬುಧವಾರದಿಂದ ಅನಿರ್ದಿಷ್ಟಉಪವಾಸ ಆರಂಭಿಸಿದ್ದಾರೆ. ಪಕ್ಷವು ಸ್ವೀಕರಿಸಿದ ವಿದೇಶೀ ದೇಣಿಗೆಯ ಮೂಲಗಳ ಮಾಹಿತಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿ ಅವರು ನಿರಶನ ಆರಂಭಿಸಿದ್ದಾರೆ. ಪಕ್ಷದ ನಾಯಕರಾದ ಸತ್ಯೇಂದ್ರ ಜೈನ್, ಆಶೀಷ್ ಖೇತಾನ್, ರಾಘವ ಚಡ್ಢಾ, ಸಂಜಯ್ ಸಿಂಗ್ ಮತ್ತು ದುರ್ಗೇಶ ಪಾಠಕ್ ಅವರನ್ನು ವಿದೇಶಿ ನಿಧಿ ಸಂಗ್ರಹಕ್ಕಾಗಿ ಕೇಜ್ರಿವಾಲ್ ವಿದೇಶಕ್ಕೆ ಕಳಿಸಿದ್ದರು. ಆಗ ಸಂಗ್ರಹವಾದ ವಿದೇಶಿ ನಿಧಿಯ ವಿವರವನ್ನು ಈವರೆಗೆ ಏಕೆ ಪಕ್ಷ ಬಹಿರಂಗಪಡಿಸಿಲ್ಲ ಎಂದು ಮಿಶ್ರಾ ಪ್ರಶ್ನಿಸಿದ್ದಾರೆ.