ನವದೆಹಲಿ: ಸ್ವತಂತ್ರ ರಾಷ್ಟ್ರಕ್ಕಾಗಿ ಹೋರಾಟ ಮಾಡುತ್ತಿರುವ ಬಲೂಚಿಸ್ತಾನದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಪರಿಣಾಮ 17 ಮಂದಿ ಸಾವನ್ನಪ್ಪಿ 35ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ.
ಪಾಕಿಸ್ತಾನ ಸಂಸತ್ತಿನ ಉಪ ಸಭಾಪತಿ ಮೌಲಾನಾ ಅಬ್ದುಲ್ ಗಫೂರ್ ಹೈದರಿ ಕಾರನ್ನು ಗುರಿಯಾಗಿರಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ.
ಶುಕ್ರವಾರವಾದ್ದರಿಂದ ಮೌಲಾನಾ ಅಬ್ದುಲ್ ಗಫೂರ್ ಹೈದರಿಯವರು ಮಸೀದಿಗೆ ತೆರಳಿ ನಮಾಜು ಮುಗಿಸಿಕೊಂಡು ವಾಪಸಾಗುತ್ತಿದ್ದರು. ಈ ವೇಳೆ ಬಾಂಬ್ ಸ್ಫೋಟಿಸಲಾಗಿದೆ ಎಂದು ತಿಳಿದುಬಂದಿದೆ.
ಗಫೂರ್ ಹೈದರಿಯವರನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ. ಇದೊಂದು ಆತ್ಮಹತ್ಯೆ ದಾಳಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಫೋಟದಲ್ಲಿ ಮೌಲಾನಾ ಅಬ್ದುಲ್ ಗಫೂರ್ ಅವರೂ ಕೂಡ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ಕ್ವೆಟ್ಟಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಳಿಗೆ ಪಾಕಿಸ್ತಾನದ ಆಂತರಿಕ ಸಚಿವ ಚೌಧರಿ ನಿಸಾರ್ ಅವರು ಖಂಡನೆ ವ್ಯಕ್ತಪಡಿಸಿದ್ದರು. ದಾಳಿ ಸಂಬಂಧ ಕೂಡಲೇ ಬಲೂಚಿಸ್ತಾನ ಪೊಲೀಸರು ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.