ಜಮ್ಮು: ನಿರಂತರ ದಾಳಿಗಳಿಂದಾಗಿ ತತ್ತರಿಸಿ ಹೋಗಿದ್ದ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಶಾಂತಿ ಮರುಸ್ಥಾಪನೆಗೊಂಡಿದೆ ಎಂದು ಶುಕ್ರವಾರ ತಿಳಿದುಬಂದಿದೆ.
ಮೇ.10 ರಿಂದಲೂ ಪಾಕಿಸ್ತಾನ ಸೇನೆ ಗಡಿಯಲ್ಲಿ ಭಾರತೀಯ ಸೇನೆ ಹಾಗೂ ನಾಗರಿಕ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಶೆಲ್ ಹಾಗೂ ಗುಂಡುಗಳ ಮೂಲಕ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು.
ಕಳೆದ 8 ದಿನಗಳಿಂದಲೂ ಗಡಿಯಲ್ಲಿ ನೆಲೆಯೂರಿದ್ದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಪಾಕಿಸ್ತಾನ ಸೇನೆ ಶೆಲ್ ಗಳ ದಾಳಿ ಹಿನ್ನಲೆಯಲ್ಲಿ ಗಡಿಯಲ್ಲಿರುವ 2.200ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿತ್ತು.
ರಜೌರಿ, ಪುಲ್ವಾಮ, ನೌಶೆರಾ ಸೇರಿದಂತೆ ಹಲವೆಡೆ ಪಾಕಿಸ್ತಾನ ಸೇನೆ ನಡೆಸಿದ್ದ ದಾಳಿಗೆ ನಾಗರೀಕ ಪ್ರದೇಶಗಳು ನಾಶಗೊಂಡಿವೆ. ಸಾಕಷ್ಟು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.
8 ದಿನಗಳ ಸುದೀರ್ಘ ಗುಂಡಿನ ಚಕಮಕಿಗಳ ಬಳಿಕ ಗಡಿಯಲ್ಲಿ ಇದೀಗ ಮತ್ತೆ ಶಾಂತಿ ಮರುಸ್ಥಾಪನೆಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಯಾವುದೇ ಗುಂಡಿನ ಚಕಮಕಿ, ಶೆಲ್ ಗಳ ದಾಳಿ ನಡೆಯುತ್ತಿಲ್ಲ. ಪ್ರಸ್ತುತ ಗಡಿಯಲ್ಲಿ ಶಾಂತಿ ಮರುಸ್ಥಾಪನೆಯಾಗಿದೆ ಎಂದು ರಜೌರಿ ಜಿಲ್ಲೆಯ ಉಪ ಆಯುಕ್ತ ಶಾಹಿದ್ ಇಕ್ಬಾಲ್ ಚೌಧರಿ ಹೇಳಿದ್ದಾರೆ.