ಧೋಲಾ-ಸಾದಿಯಾ ಸೇತುವೆಗೆ ಭೂಪೇನ್ ಹಜಾರಿಕಾ ಸೇತುವೆ ಎಂದು ನಾಮಕರಣ

ಶುಕ್ರವಾರ ಉದ್ಘಾಟನೆಯಾಗಿರುವ ಧೋಲಾ-ಸಾದಿಯಾ ಸೇತುವೆಗೆ ಭವಿಷ್ಯದಲ್ಲಿ ಭೂಪೇನ್ ಹಜಾರಿಕಾ ಸೇತುವೆ ಎಂದು ನಾಮಕರಣ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಹಾಗೂ ಭೂಪೇನ್ ಹಜಾರಿಕಾ
ಪ್ರಧಾನಿ ಮೋದಿ ಹಾಗೂ ಭೂಪೇನ್ ಹಜಾರಿಕಾ
Updated on: 

ಗುವಾಹತಿ: ಶುಕ್ರವಾರ ಉದ್ಘಾಟನೆಯಾಗಿರುವ ಧೋಲಾ-ಸಾದಿಯಾ ಸೇತುವೆಗೆ ಭವಿಷ್ಯದಲ್ಲಿ ಭೂಪೇನ್ ಹಜಾರಿಕಾ ಸೇತುವೆ ಎಂದು ನಾಮಕರಣ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಸ್ಸಾಂನ ಧೋಲಾದಲ್ಲಿ ಸೇತುವೆ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭವಿಷ್ಯದಲ್ಲಿ ಈ ಮಹತ್ವದ ಸೇತುವೆಗೆ ಖ್ಯಾತ ನಟ ಹಾಗೂ ಗಾಯಕ ಭೂಪೇನ್ ಹಜಾರಿಕಾ ಅವರ ಹೆಸರು ನಾಮಕರಣ  ಮಾಡುವುದಾಗಿ ಘೋಷಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಈ ಘೋಷಣೆ ಹೊರಬೀಳುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಸಾರ್ವಜನಿಕರು ಚಪ್ಪಾಳೆ ತಟ್ಟುವ ಮೂಲಕ ಸರ್ಕಾರದ ನಿರ್ಧಾರಕ್ಕೆ ತಮ್ಮ ಸಮ್ಮತಿ  ಸೂಚಿಸಿದರು.

ಚಿತ್ರರಂಗದಲ್ಲಿ ಭೂಪೇನ್ ಹಜಾರಿಕಾ ಅವರದು ಮರೆಯಲಾಗದ ವ್ಯಕ್ತಿತ್ವವಾಗಿದ್ದು, ಮಲ್ಟಿಟ್ಯಾಲೆಂಟೆಡ್ ಆಗಿದ್ದ ಭೂಪೇನ್ ಹಜಾರಿಕಾ ಅವರು, ಕಲೆ, ಸಾಹಿತ್ಯ, ಸಂಗೀತಗಾರ, ಹಾಡುಗಾರ, ಗೀತ ರಚನೆಕಾರ, ಉತ್ತಮನಟ ಹಾಗೂ  ಉತ್ತಮ ಪತ್ರಕರ್ತರೂ ಕೂಡ ಆಗಿದ್ದರು. ಅಸ್ಸಾಂ ಚಿತ್ರರಂಗದಲ್ಲಿ ಭೂಪೇನ್ ಹಜಾರಿಕಾ ಅವರು ನಿಜಕ್ಕೂ ದಿಗ್ಗಜ ನಟರಾಗಿದ್ದರು. ಸುಮಾರು 40 ವರ್ಷಗಳ ಕಾಲ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಭೂಪೇನ್ ಹಜಾರಿಕಾ ಸೇವೆ  ಸಲ್ಲಿಸಿದ್ದಾರೆ. ಅಂತೆಯೇ 1967ರಿಂದ 1972ರವರೆಗೂ ಶಾಸಕರಾಗಿ ಸೇವೆ ಸಲ್ಲಿಸಿದ್ದರು.

ಅಸ್ಸಾಂ ನ ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಾಣಗೊಂಡಿರುವ ದೇಶದ ಅತಿ ಉದ್ದದ ಸೇತುವೆ ಶುಕ್ರವಾರ ಲೋಕಾರ್ಪಣೆಗೊಂಡಿದ್ದು, ಸೇತುವೆ ಧೋಲಾ ಮತ್ತು ಸದಿಯಾ ನಡುವೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ  ಗಡಿರಾಜ್ಯ ಅರುಣಾಚಲ ಮತ್ತು ಅಸ್ಸಾಂ ನಡುವೆ ಸಂಪರ್ಕ ಕಲ್ಪಿಸುತ್ತದೆ. ಸುಮಾರು 9.15 ಕಿ.ಮೀ. ಉದ್ದವಿರುವ ಈ ಸೇತುವೆ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಸೇತುವೆ (5.6 ಕಿ.ಮೀ.)ಗಿಂತ ಶೇ.30ರಷ್ಟು ಉದ್ದವಾಗಿದೆ.  ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಾಣಗೊಂಡಿರುವ ನಾಲ್ಕನೇ ಸೇತುವೆ ಇದಾಗಿದ್ದು, ಸೇನಾ ಸಿಬ್ಬಂದಿಗೆ ಅಸ್ಸಾಂನಿಂದ ಅರುಣಾಚಲ ಪ್ರದೇಶ-ಚೀನಾ ಗಡಿ ಪ್ರದೇಶದಲ್ಲಿರುವ ಪೋಸ್ಟ್‌ಗಳಿಗೆ ತೆರಳಲು ನೆರವಾಗಲಿದೆ. ಈ ಸೇತುವೆ  ಗುವಾಹತಿಯಿಂದ 540 ಕಿ.ಮೀ ದೂರದಲ್ಲಿದ್ದು, ಮತ್ತೊಂದು ತುದಿ ಅರುಣಾಚಲ ಪ್ರದೇಶ ರಾಜಧಾನಿ ಇಟಾನಗರದಿಂದ 300 ಕಿ.ಮೀ ದೂರದಲ್ಲಿದೆ.

2011ರಲ್ಲಿ ಅಸ್ಸಾಂ ನಲ್ಲಿ ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ಈ ಸೇತುವೆ ಕಾಮಗಾರಿ ಆರಂಭವಾಗಿತ್ತು. ಈ ಸೇತುವೆ ನಿರ್ಮಾಣಕ್ಕೆ 950 ಕೋಟಿ ರು.ವೆಚ್ಚ ಮಾಡಲಾಗಿದ್ದು, ಗಡಿ ರಾಜ್ಯಗಳ ಮೂಲಸೌಕರ್ಯಾಭಿವೃದ್ದಿಗೆ 2005ರಲ್ಲಿ  ಕೇಂದ್ರ ಸರ್ಕಾರ ನೀಡಿದ್ದ 15 ಸಾವಿರ ಕೋಟಿ ರು.ಪ್ಯಾಕೇಜ್ ನಡಿಯಲ್ಲಿನ ಹಣ ಕೂಡ ಈ ಅತೀ ಉದ್ದದ ಸೇತುವೆ ನಿರ್ಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.

ಸೇತುವೆ ನಿರ್ಮಾಣ ಮೂಲಕ ಚೀನಾಗೆ ಸಡ್ಡು ಹೊಡೆದ ಭಾರತ
ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ಎರಡೂ ರಾಜ್ಯಗಳು ಚೀನಾ ಗಡಿಗೆ ಹೊಂದಿಕೊಂಡಂತೆ ಇರುವುದರಿಂದ ವ್ಯೂಹಾತ್ಮಕವಾಗಿ ಈ ಸೇತುವೆ ಕಾರ್ಯ ನಿರ್ವಹಣೆ ಮಾಡಲಿದ್ದು, ಭಾರತದ ಪಾಲಿಗೆ ಇದು ಅತ್ಯಂತ ಮಹತ್ವದ್ದಾಗಿದೆ  ಎನ್ನಲಾಗಿದೆ. ಒಂದು ವೇಳೆ ಅಗತ್ಯ ಬಿದ್ದರೆ ಅರುಣಾಚಲ ಪ್ರದೇಶಕ್ಕೆ ಸೇನೆಯನ್ನು ರವಾನಿಸಲು ಕೂಡ ಈ ಸೇತುವೆ ನೆರವಾಗುವಂತೆ ಮುಂದಾಲೋಚನೆಯಿಂದ ಸೇತುವೆ ನಿರ್ಮಾಣ ಮಾಡಲಾಗಿದೆ. ಸುಮಾರು 60 ಟನ್ ತೂಕದ  ಯುದ್ಧ ಟ್ಯಾಂಕರ್ ಗಳನ್ನು ಹೊರುವ ಸಾಮರ್ಥ್ಯ ಈ ಸೇತುವೆಗಿದ್ದು, ಇದೇ ಕಾರಣಕ್ಕೆ ಈ ಸೇತುವೆ ಭಾರತಕ್ಕೆ ಚೀನಾ ವಿರುದ್ಧ ಬಲ ತಂದು ಕೊಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com