ಲಕ್ನೋ: ಒಂದೆಡೆ ಸುಪ್ರೀಂಕೋರ್ಟ್ ನಲ್ಲಿ ಬಾಬ್ರಿ ಮಸೀದಿ ಧ್ವಂಸ ಸಂಬಂಧ 12 ಮಂದಿ ಬಿಜೆಪಿ ನಾಯಕರ ವಿಚಾರಣೆ ನಡೆಯುತ್ತಿದೆ. ಮತ್ತೊಂದೆಡೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಈ ವೇಳೆ ಅಯೋಧ್ಯೆಯ ರಾಮಜನ್ಮ ಭೂಮಿ ರಾಮ್ ಲಲ್ಲಾಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡಲು ನಿರ್ಧರಿಸಿದ್ದಾರೆ, 1992ರ ಡಿಸೆಂಬರ್ 6ನೇ ತಾರೀಖಿನ ನಂತರ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಮೊದಲ ಮುಖ್ಯ ಮಂತ್ರಿಯಾಗಿದ್ದಾರೆ.
1991ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ವಿವಾದಿತ ಅಯೋಧ್ಯೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು.
ಮೇ 31 ರಂದು ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಫೈಜಾಬಾದ್- ಅಯೋಧ್ಯೆ ವಿಭಾಗದ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆಗಾಗಿ ಸಿಎಂ ತೆರಳುತ್ತಿದ್ದಾರೆ. ಜೊತೆಗೆ ಮಹಾಂತ್ ನೃತ್ಯ ಗೋಪಾಲ್ ದಾಸ್ ಜನ್ಮೋತ್ಸವ ಕಾರ್ಯಕ್ರಮದಲ್ಲೂ ಕೂಡ ಯೋಗಿ ಭಾಗಿಯಾಗಲಿದ್ದಾರೆ.